ಮೈಸೂರು(Mysuru): ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಆಧಾರ್ ಕಾರ್ಡ್ ನವೀಕರಣ ಕಾರ್ಯಕ್ಕೆ ಬುಧವಾರ ಕೆ.ಆರ್.ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ವಿವೇಕಾನಂದನಗರದ ನಾಮದೇವ ಸಿಂಪಿ ಸಮುದಾಯ ಭವನದಲ್ಲಿ ವಾರ್ಡ್ 59ರ ಸರ್ಕಾರಿ ಸವಲತ್ತುಗಳ ಅದಾಲತ್ ಮತ್ತು ವಾರ್ಡ್ ಸಮಸ್ಯೆ ಪರಿಹಾರ ಮತ್ತು ಉಚಿತ ಮಧುಮೇಹ (ಡಯಾಬಿಟಿಸ್) ಮತ್ತು ಕಣ್ಣಿನ ತಪಾಸಣೆ ಹಾಗೂ ಆಧಾರ್ ನವೀಕರಣ ಶಿಬಿರವನ್ನು ಆಯೋಜಿಸಲಾಗಿತ್ತು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರೇ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತೀ ಹತ್ತು ವರ್ಷಗಳಿಗೊಮ್ಮೆ ಎಲ್ಲರೂ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಬೇಕಿದೆ. ಇದು ಪ್ರಸ್ತುತ ಅತಿ ಮುಖ್ಯ ದಾಖಲೆಯಾಗಿರುವುದರಿಂದ ನವೀಕರಣ ಅನಿವಾರ್ಯ ಎಂದರು.
ವಿಜ್ಞಾನ ನಾಗಾಲೋಟದಲ್ಲಿ ಓಡುತ್ತಿರುವ ಈ ಸಂದರ್ಭದಲ್ಲಿ ವಂಚನೆಯ ಪ್ರಕರಣಗಳೂ ಕೂಡ ದಿನೇ ದಿನೇ ಮಿತಿಮೀರುತ್ತಿವೆ. ಸೈಬರ್ ಅಪರಾಧ ಹೆಚ್ಚುತ್ತಿರುವ ಈ ವೇಳೆ ತಮ್ಮೆಲ್ಲಾ ದಾಖಲೆಗಳು ಕಾಲಕಾಲಕ್ಕೆ ಸರಿಪಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಭವಿಷ್ಯದಲ್ಲಿ ಈ ದಾಖಲೆಗಳು ಇನ್ನೂ ಸರಳೀಕರಣಗೊಂಡು ಆಗಬಹುದಾದ ವಂಚನೆಯನ್ನು ತಡಯುವ ದಿಕ್ಕಿನಲ್ಲಿ ವಿಜ್ಞಾನ ತನ್ನ ದಾಪುಗಾಲು ಹಾಕುತ್ತಿದೆ. ಅಲ್ಲಿಯವರೆಗೆ ವಂಚಕರ ಬಲೆಗೆ ಬೀಳದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.