ಬೆಂಗಳೂರು: ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿದ ಎಂಟು ಬಾರಿ ಚಾಂಪಿಯನ್ಸ್ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಇನಿಂಗ್ಸ್ ಹಾಗೂ 281 ರನ್’ಗಳಿಂದ ಭರ್ಜರಿ ಗೆಲುವು ಪಡೆಯಿತು.
ಆ ಮೂಲಕ 2022-23ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್’ಗೆ ಪ್ರವೇಶಿಸಿತು.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 3 ವಿಕೆಟ್ ನಷ್ಟಕ್ಕೆ 106 ರನ್’ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ಉತ್ತರಾಖಂಡ, ನಾಲ್ಕನೇ ದಿನ ಕೇವಲ 103 ರನ್’ಗಳನ್ನು ಮಾತ್ರ ಕಲೆ ಹಾಕಿತು. ಕರ್ನಾಟಕ ತಂಡದ ಬೌಲರ್ಗಳ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಮತ್ತೊಮ್ಮೆ ನಲುಗಿದ ಉತ್ತರಾಖಂಡ ತಂಡ 73.4 ಓವರ್’ಗಳಿಗೆ 209 ರನ್’ಗಳಿಗೆ ಆಲ್ಔಟ್ ಆಯಿತು. ಸ್ವಪ್ನಿಲ್ ಸಿಂಗ್ (51 ರನ್) ಉತ್ತರಾಖಂಡ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಪಂದ್ಯದ ಪ್ರಥಮ ಇನಿಂಗ್ಸ್’ನಲ್ಲಿ 161 ರನ್ ಗಳಿಸಿದ್ದ ಶ್ರೇಯಸ್ ಗೋಪಾಲ್ ಉತ್ತರಾಖಂಡ ತಂಡದ ದ್ವಿತೀಯ ಇನಿಂಗ್ಸ್’ನಲ್ಲಿ 26 ರನ್ ಕೊಟ್ಟು 3 ವಿಕೆಟ್ಗಳನ್ನು ಕಬಳಿಸಿದರು. ಆ ಮೂಲಕ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಈ ಹಿನ್ನೆಲೆಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶ್ರೇಯಸ್ ಗೋಪಾಲ್ ಜೊತೆಗೆ ವೈಶಾಖ ವಿಜಯಕುಮಾರ್ 55 ರನ್’ಗಳಿಗೆ 3 ವಿಕೆಟ್ ಕಬಳಿಸಿದರೆ, ವಿದ್ವತ್ ಕಾವೇರಪ್ಪ 30 ರನ್ಗಳಿಗೆ ಎರಡು ವಿಕೆಟ್ ಹಾಗೂ ಎಂ ವೆಂಕಟೇಶ್ ಅವರು ಕೂಡ 44 ಕ್ಕೆ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು. ಇದಕ್ಕೂ ಮುನ್ನ ಉತ್ತರಾಖಂಡ ತಂಡದ ಪ್ರಥಮ ಇನಿಂಗ್ಸ್ನಲ್ಲಿಯೂ ವೆಂಕಟೇಶ್ 5 ವಿಕೆಟ್ ಸಾಧನೆ ಮಾಡಿದ್ದರು.
ಉತ್ತರಾಖಂಡ 116ಕ್ಕೆ ಆಲ್ಔಟ್: ಇದಕ್ಕೂ ಮುನ್ನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಕರ್ನಾಟಕ ತಂಡ ಅಂದುಕೊಂಡಂತೆ ಎದುರಾಳಿ ಉತ್ತರಾಖಂಡ ತಂಡವನ್ನು ಕೇವಲ 116 ರನ್’ಗಳಿಗೆ ಆಲ್’ಔಟ್ ಮಾಡಿತ್ತು. ಕರ್ನಾಟಕ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಎಂ ವೆಂಕಟೇಶ್ 36 ರನ್ ಕೊಟ್ಟು ಐದು ವಿಕೆಟ್ ಸಾಧನೆ ಮಾಡಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಉತ್ತರಾಖಂಡ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತ್ತು. ಕರ್ನಾಟಕ ಪರ ರವಿಕುಮಾರ್ ಸಮರ್ಥ್ (82 ರನ್), ನಾಯಕ ಮಯಾಂಕ್ ಅಗರ್ವಾಲ್(83 ರನ್) ದೇವದತ್ ಪಡಿಕ್ಕಲ್ (69 ರನ್) ಹಾಗೂ ನಿಕಿನ್ ಜೋಸ್ (62) ಅರ್ಧಶತಕಗಳನ್ನು ಸಿಡಿಸಿದರು. ಇವರ ಜೊತೆಗೆ ಶ್ರೇಯಸ್ ಗೋಪಾಲ್ ಅದ್ಭುತ ಬ್ಯಾಟ್ ಮಾಡಿ 161 ರನ್ ಸಿಡಿಸಿದರು. ಆ ಮೂಲಕ ಕರ್ನಾಟಕ ತಂಡ 162.5 ಓವರ್ಗಳಿಗೆ 606 ರನ್ ಗಳಿಸಿತು. ಆ ಮೂಲಕ ಪ್ರಥಮ ಇನಿಂಗ್ಸ್ ದೊಡ್ಡ ಮುನ್ನಡೆ ಪಡೆದಿತ್ತು.