ಮೈಸೂರು: ಫೆಬ್ರವರಿ 21 ರಂದು ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಅಯೋಜಿಸಲಾಗಿದೆ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರಾಮದಾಸ್ ತಿಳಿಸಿದರು.
ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯೋಗ ಅವಕಾಶಗಳ ಬಗ್ಗೆ ಸ್ಟಾಲ್‌ಗಳನ್ನು ನಿರ್ಮಿಸಿ ಮಾಹಿತಿ ನೀಡಲಾಗುವುದು. ಕೌಶಲ್ಯ ಮಾಹಿತಿ ಮತ್ತು ಪ್ಲೇಸ್’ಮೆಂಟ್ ಮೇಳದಲ್ಲಿ ಎಸ್,ಎಸ್,ಎಲ್,ಸಿ ಉತ್ತೀರ್ಣ/ಅನುತ್ತೀರ್ಣರಾದವರಿಂದ ಹಿಡಿದು ಉನ್ನತ ವ್ಯಾಸಂಗ ಮಾಡಿದವರು ಹಾಗೂ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿರುವವರು ಭಾಗವಹಿಸಬಹುದಾಗಿದೆ ಎಂದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ವೆಬ್‌ಸೈಟ್ ಸೃಜನೆ ಮಾಡಿದ್ದು, ವೆಬ್‌ಸೈಟ್ ಮೂಲಕ ಆಸಕ್ತ ಅಭ್ಯರ್ಥಿಗಳು ತಮ್ಮ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಚೀನಾ ದೇಶದಲ್ಲಿ ಇಂಗ್ಲೀಷ್ ಶಿಕ್ಷಕರು ಹಾಗೂ ಯೋಗ ತರಬೇತಿದಾರರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಸಿದರು.
ಉನ್ನತ ವಿದ್ಯಾಭ್ಯಾಸ ಮತ್ತು ವಿದೇಶಗಳಿಗೆ ಹೋಗುವವರಿಗೆ ಕೆಂದ್ರ ಸರ್ಕಾರದ ವತಿಯಿಂದ ತರಬೇತಿ ಮತ್ತು ಸೌಲಭ್ಯ ನೀಡಲಾಗುವುದು. ಈ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದಲೇ ವಿದೇಶಕ್ಕೆ ತೆರಳಲು ವೀಸಾ ಸೌಲಭ್ಯ ಮಾಡಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 4470 ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳಿದ್ದು, ಅವರ ಪೋಷಕರನ್ನು ಕರೆದು ಸಭೆ ನಡೆಸಲಾಗಿದೆ. ಈ ಬಾರಿ ಶೇ 100 ರಷ್ಟು ಫಲಿತಾಂಶ ಬರುವ ಗುರಿ ಹೊಂದಿದ್ದೇವೆ ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.