ಮನೆ Uncategorized ವಾಣಿ ವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಕ್ಲೋರಿನ್ ಸೋರಿಕೆ: 20 ಮಂದಿಗೆ ಉಸಿರಾಟದ ಸಮಸ್ಯೆ

ವಾಣಿ ವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಕ್ಲೋರಿನ್ ಸೋರಿಕೆ: 20 ಮಂದಿಗೆ ಉಸಿರಾಟದ ಸಮಸ್ಯೆ

0

ಮೈಸೂರು: ನಗರದ ಕೆ ಆರ್ ಎಸ್ ರಸ್ತೆಯಲ್ಲಿರುವ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ದಾಸಪ್ಪ ವೃತ್ತದಿಂದ ಕೆ ಅರ್ ಎಸ್ ರಸ್ತೆಯನ್ನು ಬಂದ್ ಮಾಡಲಾಗಿದ್ದು, .20 ಕ್ಕೂ ಅಧಿಕ ಮಂದಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ.

ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ‌ ಇಲಾಖೆ ಸಿಬ್ಬಂದಿ ಸೋರಿಕೆಯನ್ನು ತಡೆದರು.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮು, ‘ಕ್ಲೋರಿನ್ ಸೋರಿಕೆಯನ್ನು ಸಂಪೂರ್ಣ ತಡೆಗಟ್ಟಲಾಗಿದೆ. ವಾತಾವರಣದಲ್ಲಿ ಇನ್ನೂ ಕ್ಲೋರಿನ್ ಇರುವುದರಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ’ ಎಂದು ಹೇಳಿದರು

ಕ್ಲೋರಿನ್ ಅನಿಲ ಸೋರಿಕೆಯಿಂದ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಸಮೀಪ ಇರುವ ನಿವಾಸಿಗಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಸುಮಾರು 20 ಕ್ಕೂ ಅಧಿಕ ಮಂದಿ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದಾರೆ. ಈಗ ಬಂದಿರುವ ಎಲ್ಲರೂ ಆರೋಗ್ಯವಾಗಿದ್ದು, ಅಲ್ಪಪ್ರಮಾಣದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಕಾಂಪೌಂಡ್ ಗೆ ಹೊಂದಿಕೊಂಡಿರುವ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಸೋರಿಕೆಯಾಗಿದೆ. ಇದಕ್ಕೂ ನಮಗೂ ಸಂಬಂಧ ಇಲ್ಲ. ನೀರು ಸರಬರಾಜು ಕೇಂದ್ರದಲ್ಲಿ ಸೋರಿಕೆ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೇಂದ್ರದ ಸಿಬ್ಬಂದಿಯನ್ನು ಮುಂಚಿತವಾಗಿಯೇ ಮನೆಗೆ ಕಳುಹಿಸಲಾಗಿದೆ ಎಂದು ಕೇಂದ್ರದ ಕಾರ್ಯನಿರ್ವಾಹಕ ಎಂಜಿನಿಯರ್ ಸುವರ್ಣ ತಿಳಿಸಿದರು.