ನಾವು ತಿನ್ನುವ ಹಲವಾರು ಕಾಳುಗಳಲ್ಲಿ ಕಡಲೆಕಾಳು ಕೂಡ ಒಂದು. ಬಹಳಷ್ಟು ರುಚಿಕರ ಖಾದ್ಯಗಳನ್ನು ಇದರಿಂದ ತಯಾರಿಸಿ ತಿನ್ನಬಹುದು. ಇದರಿಂದ ಬೇಳೆ ಮಾಡಿದರೂ, ಅದು ಕೂಡ ಆರೋಗ್ಯಕ್ಕೆ ಲಾಭ.
ಕಪ್ಪು ಕಡಲೆಕಾಳು ತನ್ನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್, ಜಿಂಕ್ ಮತ್ತು ಫೋಲೆಟ್ ಪ್ರಮಾಣವನ್ನು ಒಳಗೊಂಡಿದ್ದು, ದೇಹದ ಕೊಲೆಸ್ಟ್ರಾಲ್ ಪ್ರಮಾಣವನ್ನು ಇದು ಸಾಕಷ್ಟು ಕಡಿಮೆ ಮಾಡುತ್ತದೆ. ಯಾಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇದೆ.
ಕಡಲೆಕಾಳಿನಲ್ಲಿ ಸಿಗುವ ಪ್ರಯೋಜನಗಳು
• ಇದರ ಜೊತೆಗೆ ಕಡಲೆಕಾಳು ಹೈಪೋ ಗ್ಲೈಸಮಿಕ್ ಸೂಚ್ಯಂಕ ಹೊಂದಿದ್ದು, ಮಧುಮೇಹ ಸಮಸ್ಯೆ ಇರುವ ಅಥವಾ ಸಕ್ಕರೆ ಕಾಯಿಲೆ ಇರುವ ಜನರಿಗೆ ಇದು ಸಾಕಷ್ಟು ಅನುಕೂಲವಾಗಲಿದೆ. ಯಾವುದೇ ತರಹದಲ್ಲಿ ಇದು ತಿನ್ನಲು ಬಾಯಿಗೆ ರುಚಿಕರವಾಗಿರುತ್ತದೆ.
• ಅಂದರೆ ಕಡಲೆಕಾಳನ್ನು ನೀವು ನೆನೆ ಹಾಕಿ ತಿನ್ನಬಹುದು, ಮೊಳಕೆ ಕಟ್ಟಿ ತಿನ್ನಬಹುದು, ಹುರಿದು ತಿನ್ನಬಹುದು. ಪುಡಿಮಾಡಿಕೊಂಡು ಕಡಲೆಹಿಟ್ಟು ವಿವಿಧ ಬಗೆಗಳಲ್ಲಿ ಸೇವಿಸಬಹುದು.
• ಪ್ರತಿದಿನ ಯಾವುದಾದರೂ ರೂಪದಲ್ಲಿ ಕಡಲೆಕಾಳು ಸೇವನೆ ಮಾಡುವುದರಿಂದ ಅವುಗಳ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಲೇಖನದಲ್ಲಿ ಕಡಲೆಕಾಳುಗಳ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲಾಗಿದೆ.
ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಿಸುತ್ತದೆ
• ಹಲವರಿಗೆ ಪ್ರತಿ ದಿನ ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಕಂಡು ಬರುತ್ತಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಅವರ ಆಹಾರದಲ್ಲಿ ನಾರಿನ ಅಂಶ ಕಡಿಮೆ ಇರುವುದು.
• ಆದರೆ ಕಡಲೆಕಾಳನ್ನು ನಿಯಮಿತವಾಗಿ ಆಗಾಗ ಸೇವನೆ ಮಾಡುತ್ತಿದ್ದರೆ, ಈ ರೀತಿಯ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ತೊಂದರೆಗಳು ಇರುವುದಿಲ್ಲ.
• ವಾಕರಿಕೆ ಬಂದಂತಾಗುವುದು, ವಾಂತಿ ಸಮಸ್ಯೆ, ಭೇದಿ ಈ ರೀತಿಯ ಯಾವುದೇ ತೊಂದರೆಗಳು ನಿವಾರಣೆ ಯಾಗುತ್ತವೆ. ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿರುವ ಕಡಲೆಕಾಳು ಸೇವನೆಯಿಂದ ಅನ್ನನಾಳ ಹಾಗೂ ಜೀರ್ಣನಾಳ ಸ್ವಚ್ಛವಾಗುತ್ತದೆ.
ದೇಹಕ್ಕೆ ಶಕ್ತಿ ಸಿಗುತ್ತದೆ
• ಕಡಲೆಕಾಳು ತನ್ನಲ್ಲಿ ಅಪಾರ ಪ್ರಮಾಣದ ಪ್ರೊಟೀನ್ ಒಳಗೊಂಡಿರುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ಚೈತನ್ಯ ಸಿಗುತ್ತದೆ.
• ಪ್ರಮುಖವಾಗಿ ಇದರಲ್ಲಿ ಕಂಡುಬರುವ ಅಮೈನೋ ಆಮ್ಲ ನಮ್ಮ ದೇಹದ ಜೀವಕೋಶಗಳ ಕಾರ್ಯ ಚಟುವಟಿ ಕೆಯನ್ನು ವೃದ್ಧಿಸುತ್ತದೆ. ಮುಖ್ಯವಾಗಿ ಇದರಿಂದ ಮಾಂಸ ಖಂಡಗಳ ಬಲವರ್ಧನೆ ಆಗುತ್ತದೆ ಎಂದು ತಿಳಿದು ಬಂದಿದೆ.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
• ಕಡಲೆಕಾಳು ತನ್ನಲ್ಲಿ ಒಳ್ಳೆಯ ಪ್ರಮಾಣದ ಕ್ಯಾಲ್ಸಿಯಂ ಒಳಗೊಂಡಿರುವುದರಿಂದ ಮೂಳೆಗಳ ಆರೋಗ್ಯಕ್ಕೆಇದರ ಪ್ರಭಾವ ಹೆಚ್ಚಾಗಿರುತ್ತದೆ.
• ಪ್ರಮುಖವಾಗಿ ಇದರಲ್ಲಿ ಫಾಸ್ಫೇಟ್ ಇರುವುದರಿಂದ ಮತ್ತು ವಿಟಮಿನ್ ಅಂಶಗಳು ಜೊತೆಗೆ ಕ್ಯಾಲ್ಸಿಯಂ ಪ್ರಮಾಣ ಕೂಡ ಹೆಚ್ಚಾಗಿರುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ.
ರಕ್ತಹೀನತೆ ಸಮಸ್ಯೆಗೆ ಪರಿಹಾರ
• ಯಾರಿಗೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇರುತ್ತದೆ ಅಂತಹವರು ಅನೀಮಿಯ ಸಮಸ್ಯೆಗೆ ಬಹಳ ಬೇಗನೆ ಗುರಿಯಾಗುತ್ತಾರೆ.
• ವಿಶೇಷವಾಗಿ ಮಹಿಳೆಯರಿಗೆ ತಮ್ಮ ಮುಟ್ಟಿನ ಸಂದ ರ್ಭದಲ್ಲಿ, ಗರ್ಭಾವಸ್ಥೆ ಹಾಗೂ ಬಾಣಂತನದ ಸಮಯದಲ್ಲಿ ಈ ತೊಂದರೆ ಜಾಸ್ತಿ ಎಂದು ಹೇಳ ಲಾಗುತ್ತದೆ.
• ಹಾಗಾಗಿ ಕಡಲೆ ಕಾಳು ಅಥವಾ ಮೊಳಕೆ ಕಟ್ಟಿದ ಕಡಲೆ ಕಾಳು ಸೇವನೆಯಿಂದ ದೇಹಕ್ಕೆ ಕಬ್ಬಿಣದ ಪ್ರಮಾಣ ಮತ್ತು ಪೋಲೆಟ್ ಹೆಚ್ಚಾಗಿ ಸಿಕ್ಕಂತಾಗಿ ಇಡೀ ದೇಹದ ಕಾರ್ಯ ಚಟುವಟಿಕೆ ಹೆಚ್ಚಾಗುತ್ತದೆ.
ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತದೆ
ಅಪಾರ ಪ್ರಮಾಣದ ನಾರಿನ ಅಂಶ ಒಳಗೊಂಡಿರುವ ಕಡಲೆ ಕಾಳು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ಇರುವವರು ಅಥವಾ ಸಕ್ಕರೆ ಕಾಯಿಲೆ ಬರಬಹುದು ಎಂಬ ಸೂಚನೆ ಸಿಕ್ಕಿರುವ ಜನರು ತಮ್ಮ ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಉತ್ತಮ ವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಗ್ಲುಕೋಸ್ ದೇಹ ಸರಿಯಾಗಿ ಹೀರಿಕೊಳ್ಳುವಂತೆ ಮಾಡಬಹುದು.