ಮನೆ ಅಪರಾಧ 1 ಲಕ್ಷ ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

1 ಲಕ್ಷ ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

0

ಬಳ್ಳಾರಿ: ಮನೆ ನಿರ್ಮಾಣಕ್ಕೆ ಅನುಮತಿ ನೀಡಲು ಒಂದು ಲಕ್ಷ ಹಣ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.

ಪ್ರಶಾಂತ್‌ರೆಡ್ಡಿ, ಯೋಗೀಶ್, ಮೊಹಮ್ಮದ್ ಗೌಸ್ ಸಿಬಿಐ ಬಲೆಗೆ ಬಿದ್ದ ಅಧಿಕಾರಿಗಳು. ಬಳ್ಳಾರಿ ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ನಿವೇಶನದಲ್ಲಿ ಮನೆ ನಿರ್ಮಿಸಲು (ಎನ್‌’ಓಸಿ, ನಿರಾಕ್ಷೇಪಣಾ ಪತ್ರ) ಅನುಮತಿ ಕೋರಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಎನ್ನುವವರು ಕೇಂದ್ರ ಪುರಾತತ್ವ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪುರಸ್ಕರಿಸಿದ ಪುರಾತತ್ವ ಅಧಿಕಾರಿಗಳು, ಅನುಮತಿ ನೀಡಲು ಒಂದುವರೆ ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ರಾಜಶೇಖರ್ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು.

ಖಾಸಗಿ ಹೊಟೇಲ್‌ನಲ್ಲಿ ಮುಂಗಡ ಹಣ ಪಡೆಯಲು ಬಂದಿದ್ದ ಪುರಾತತ್ವ ಅಧಿಕಾರಿಗಳು, ಲಂಚದ ಹಣ ಸ್ವೀಕರಿಸುತ್ತಿದ್ದಾಗ ಸಿಬಿಐ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದು, ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.