ಮನೆ ರಾಜಕೀಯ ಮಹಿಳೆಯರಿಗೆ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ: ಸಿದ್ದರಾಮಯ್ಯ ಘೋಷಣೆ

ಮಹಿಳೆಯರಿಗೆ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ: ಸಿದ್ದರಾಮಯ್ಯ ಘೋಷಣೆ

0

ಕೋಲಾರ: ಮಹಿಳೆಯರಿಗೆ ನೀಡಲಾಗುತ್ತಿರುವ 50 ಸಾವಿರ ರೂ ಬಡ್ಡಿರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಗೆ ಏರಿಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೋಲಾರದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗೂ ನೀಡಲಾಗುತ್ತಿರುವ ಬಡ್ಡಿರಹಿತ ಸಾಲವನ್ನು 5 ಲಕ್ಷಕ್ಕೆ ಏರಿಸುತ್ತೇವೆ. ಶೇ. 3ರ ಬಡ್ಡಿಯಲ್ಲಿ ರೈತರಿಗೆ ನೀಡುವ ಸಾಲವನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗೆ ಏರಿಸುತ್ತೇವೆ ಎಂದು ಭರವಸೆ ನೀಡಿದರು.

ಷರತ್ತುಬದ್ಧ ಸಾಲಮನ್ನಾ ಮಾಡಲಾಗುವುದು. ಸರಿಯಾಗಿ ಸಾಲದ ಕಂತು ಕಟ್ಟುತ್ತಿರುವವರ ಸಾಲವನ್ನು ಮನ್ನಾ ಮಾಡಲಾಗುವುದು. ಬಡ್ಡಿರಹಿತ ಸಾಲದ ಪ್ರಮಾಣ ಏರಿಸುವ ಬಗ್ಗೆ ಮತ್ತು ಸಾಲ ಮನ್ನಾ ಬಗ್ಗೆ ಪಕ್ಷದ ಪ್ರಣಾಳಿಕೆ ಕಮಿಟಿ ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು ಮಾಡುತ್ತೇವೆ,  ಟೊಮ್ಯಾಟೊ ಮತ್ತು ಮಾವು ಸಂಸ್ಕರಣಾ ಘಟಕ ಮಾಡಿಕೊಡುತ್ತೇವೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುತ್ತೇವೆ, ಹಾಲಿಗೆ ಪ್ರೋತ್ಸಾಹ ಧನವನ್ನು 6 ರೂಪಾಯಿಗೆ ಹೆಚ್ಚಿಸುತ್ತೇವೆ ಎಂದು ಘೋಷಿಸಿದರು.

ರಾಜ್ಯದಲ್ಲಿ ಮತ್ತು ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಹಾಲು, ಮೊಸರು, ಅಕ್ಕಿ ಸೇರಿದಂತೆ ಮಕ್ಕಳು ಓದು ಪೆನ್ನು ಪುಸ್ತಕಗಳ ಮೇಲೂ ತೆರಿಗೆ ವಿಧಿಸಿದೆ ಎಂದ ಅವರು ಮೋದಿ ಸರ್ಕಾರ ಬಂದ ಮೇಲೆ ಉದ್ಯಮಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಕಿಡಿಕಾರಿದ ಸಿದ್ದರಾಮಯ್ಯ, ನೀವು ಶ್ರೀಮಂತರ ತೆರಿಗೆ ಕಡಿಮೆ ಮಾಡಿ ಬಡವರ ತೆರಿಗೆ ಹೆಚ್ಚಿಗೆ ಮಾಡಬಾರದು ಎಂದು ಕೇಂದ್ರ ಸರ್ಕಾರವನ್ನು ಸಿದ್ದರಾಮಯ್ಯ ತಿವಿದರು.

ಸಾಲ ಮನ್ನಾ ಮಾಡಬಾರದು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಮಿಸ್ಟರ್ ತೇಜಸ್ವಿ ಸೂರ್ಯ ನೀನು ಬಡವರ ಮೇಲೆ ಏಕೆ ಕೆಟ್ಟ ಕಣ್ಣು ಇಟ್ಟುಕೊಂಡಿದ್ದೀಯ ಎಂದು ಕಿಡಿಕಾರಿದರು.

ಕೋಲಾರದಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಪುನರುಚ್ಚರಿಸಿದ ಸಿದ್ದರಾಮಯ್ಯ, ತಾವು ಆಶೀರ್ವಾದ ಮಾಡಿದರೆ ತಾನು ಕೋಲಾರದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.