ಮುಂಬೈ: ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್’ನ ಮೊದಲ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ್ತಿ ಸ್ಮೃತಿ ಮಂದಾನ ಅವರಾಗಿದ್ದು, ₹3.4 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾರೆ.
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈನಲ್ಲಿ ಆರಂಭವಾಗಿದೆ.
26 ವರ್ಷದ ಬ್ಯಾಟರ್ ಸ್ಮೃತಿ ಮಂದಾನ ಅವರ ಮೂಲ ಬೆಲೆ ₹ 50 ಲಕ್ಷವಾಗಿತ್ತು.
ಮುಂಬೈ ಇಂಡಿಯನ್ಸ್ ಮಂದಾನಾ ಅವರಿಗಾಗಿ ಮೊದಲು ಬಿಡ್ ಮಾಡಿತು. ನಂತರ ಆರ್’ಸಿಬಿ ಬಿಡ್‌ನಲ್ಲಿ ಸೇರಿಕೊಂಡಿತು. ಭಾರತದ ಟಿ20 ಉಪನಾಯಕಿಗಾಗಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ ನಡುವೆ ತೀವ್ರ ಪೈಪೋಟಿ ನಡೆಯಿತು. ಮುಂಬೈ ತನ್ನ ಬಿಡ್ಡಿಂಗ್ ಅನ್ನು ₹2.20 ಕೋಟಿಗೆ ಏರಿಸಿತ್ತಾದರೂ, ಬಿಡ್ಡಿಂಗ್’ನಿಂದ ಹಿಂದೆ ಸರಿಯದ ಆರ್’ಸಿಬಿ ₹3.4 ಕೋಟಿಗೆ ಅವರನ್ನು ತಂಡಕ್ಕಾಗಿ ಪಡೆದುಕೊಂಡಿತು.
ಮಂದಾನ 112 ಟಿ20 ಪಂದ್ಯಗಳಲ್ಲಿ 2,651 ರನ್ ಗಳಿಸಿದ್ದಾರೆ.ಮಹಿಳಾ ಬಿಗ್‌ಬಾಷ್ ಲೀಗ್, ದಿ ಹಂಡ್ರೆಡ್ ಟೂರ್ನಿಗಳಲ್ಲಿ ಆಡಿರುವ ಸ್ಮೃತಿ ಅವರು ಫ್ರಾಂಚೈಸ್ ಕ್ರಿಕೆಟ್’ನಲ್ಲಿ ಪರಿಣತ ಆಟಗಾರ್ತಿಯಾಗಿದ್ದಾರೆ. ಟಿ20 ಮಾದರಿಯಲ್ಲಿ ಸ್ಥಿರ ಸಾಮರ್ಥ್ಯದ ಮೂಲಕ ಗಮನಸೆಳೆದಿದ್ದಾರೆ.