ಮನೆ ಕಾನೂನು 64.13 ಲಕ್ಷ ಪ್ರಕರಣ ಸಂಧಾನ ಮುಖೇನ ಇತ್ಯರ್ಥ; ಸಾರ್ವಕಾಲಿಕ ದಾಖಲೆ: ನ್ಯಾ. ವೀರಪ್ಪ

64.13 ಲಕ್ಷ ಪ್ರಕರಣ ಸಂಧಾನ ಮುಖೇನ ಇತ್ಯರ್ಥ; ಸಾರ್ವಕಾಲಿಕ ದಾಖಲೆ: ನ್ಯಾ. ವೀರಪ್ಪ

0

ರಾಜ್ಯದಾದ್ಯಂತ ಫೆಬ್ರವರಿ 11ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 64.13 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಇದು ಲೋಕ ಅದಾಲತ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ.

ಹೈಕೋರ್ಟ್ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್’ಎಲ್’ಎಸ್’ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ ವೀರಪ್ಪ ಅವರು ಈ ಬಾರಿಯ ಲೋಕ ಅದಾಲತ್ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಮಾಹಿತಿ ನೀಡಿದರು.

64 ಲಕ್ಷಕ್ಕೂ ಅಧಿಕ ಪ್ರಕರಣಗಳ ಇತ್ಯರ್ಥ

ರಾಜ್ಯದಾದ್ಯಂತರ ಶನಿವಾರ ಲೋಕ ಅದಾಲತ್ ನಡೆಸಿ, ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 1,87,171 ಪ್ರಕರಣಗಳು ಹಾಗೂ 62,26,437 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 64,13,608 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಜತೆಗೆ, 1,404 ಕೋಟಿ ರೂ. ಪರಿಹಾರ ಕೊಡಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 232 ಕೋಟಿ ರೂಪಾಯಿ ಗಳನ್ನು ಜಮೆ ಮಾಡಿಸಲಾಗಿದೆ. ಈ ಹಿಂದಿನ ಲೋಕ ಅದಾಲತ್ಗಳಿಗೆ ಹೋಲಿಸಿದರೆ ಇದು ಸಾರ್ವಕಾಲಿಕ ದಾಖಲೆ ಎಂದು ನ್ಯಾ. ವೀರಪ್ಪ ತಿಳಿಸಿದರು.

ಟ್ರಾಫಿಕ್ ಚಲನ್ ಕೇಸ್’ಗಳಲ್ಲಿ ಇತಿಹಾಸ ಸೃಷ್ಟಿಸಿದ ಪ್ರಾಧಿಕಾರ

ಕೆಎಸ್ಎಲ್ಎಸ್ಎ ಮನವಿ ಮೇರೆಗೆ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ.50 ರಿಯಾಯಿತಿ ನೀಡಿ ಸರ್ಕಾರ ಫೆಬ್ರವರಿ 2ರಂದು ಆದೇಶ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದರ ಪರಿಣಾಮವಾಗಿ ರಾಜ್ಯದಾದ್ಯಂತ 52,11,424 ಟ್ರಾಫಿಕ್ ಚಲನ್ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 152 ಕೋಟಿ ರೂಪಾಯಿ ದಂಡದ ಮೊತ್ತ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಿಯಾಯಿತಿ ದಂಡ ಪಾವತಿ ದಿನಾಂಕ ವಿಸ್ತರಣೆ ಸಾಧ್ಯತೆ

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ಮಾತ್ರ ದಂಡ ಪಾವತಿಸಲು ರಿಯಾಯತಿ ಕಲ್ಪಿಸಿ, ಅನುಮತಿ ನೀಡಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ದಂಡ ಪಾವತಿಗೆ ವಿಧಿಸಿರುವ ಗಡುವು ವಿಸ್ತರಿಸುವಂತೆ ವಿಶೇಷ ಪೊಲೀಸ್ ಆಯುಕ್ತರು ಮತ್ತು ಸಾರ್ವಜನಿಕರು ಕೆಎಸ್ಎಲ್ಎಸ್ಎಗೆ ಮನವಿ ಮಾಡಿದ್ದಾರೆ. ಹೀಗಾಗಿ, ರಿಯಾಯಿತಿ ದಂಡ ಪಾವತಿ ದಿನಾಂಕ ವಿಸ್ತರಣೆಗೆ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಕೋರಲಾಗುವುದು. ಈ ಸಂಬಂಧ ಕೆಎಸ್ಎಲ್ಎಸ್ಎ ನಾಳೆ ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಿದೆ ಎಂದು ನ್ಯಾ. ವೀರಪ್ಪ ತಿಳಿಸಿದರು.

ಸಂಚಾರ ನಿಯಮ ಉಲ್ಲಂಘಿಸಿದ 2 ಕೋಟಿಗೂ ಅಧಿಕ ಪ್ರಕರಣ ಬಾಕಿ ಇವೆ. ಈ ಪೈಕಿ 40 ಲಕ್ಷ ಪ್ರಕರಣ ಇತ್ಯರ್ಥವಾಗಿವೆ. ಸಂಚಾರಿ ನಿಯಮ ಉಲ್ಲಂಘಣೆ ಪ್ರಕರಣದಲ್ಲಿ ರಿಯಾಯತಿ ಕೊಡಿಸುವ ವಿಚಾರದಲ್ಲಿ ಸರ್ಕಾರದ ಜೊತೆ ವಿಶೇಷವಾಗಿ ಹಣಕಾಸು ಇಲಾಖೆಯ ಜೊತೆ ಭಾರಿ ಹೋರಾಟ ನಡೆಸಲಾಗಿತ್ತು ಎಂದು ನ್ಯಾ. ವೀರಪ್ಪ ಸ್ಮರಿಸಿದರು.

ಅದಾಲತ್’ನಲ್ಲಿ ಸಿಜೆಯೂ ಭಾಗಿ

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರು ಲೋಕ ಅದಾಲತ್ನಲ್ಲಿ ಖುದ್ದು ಭಾಗವಹಿಸಿದ್ದು ವಿಶೇಷವಾಗಿತ್ತು. ಕೋಲಾರ ಜಿಲ್ಲೆಯ 20 ವರ್ಷ ಹಳೆಯ ದಾವೆಯೊಂದನ್ನು ಇತ್ಯರ್ಥಪಡಿಸಿದ ಸಿಜೆ, ಬಳಿಕ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ, ಎಸಿಎಂಎಂ ನ್ಯಾಯಾಲಯ, ಮೇಯೋಹಾಲ್ ನ್ಯಾಯಾಲಯಗಳಿಗೆ ಭೇಟಿ ನೀಡಿ, ನ್ಯಾಯಾಧೀಶರು, ವಕೀಲರು ಕಕ್ಷಿದಾರರೊಂದಿಗೆ ಸಂವಾದ ನಡೆಸಿ, ಪ್ರೋತ್ಸಾಹ ನೀಡಿದರು.

ಮತ್ತೆ ಒಂದಾದ 200ಕ್ಕೂ ಅಧಿಕ ದಂಪತಿ

ಈ ಬಾರಿಯ ಲೋಕ ಅದಾಲತ್ನಲ್ಲಿ ಒಟ್ಟು 670 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 222ಕ್ಕೂ ಅಧಿಕ ಪ್ರಕರಣಗಳಲ್ಲಿ ದಂಪತಿ ಸಂಧಾನದಿಂದ ಮತ್ತೆ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ.

ಒಂದೇ ಕೇಸ್’ನಲ್ಲಿ 1.25 ಕೋಟಿ ಪರಿಹಾರ: ಮೋಟಾರು ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಒಟ್ಟು 4,050 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 179 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. ಹಾಸನದ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟ್ನಲ್ಲಿದ್ದ ಪ್ರಕರಣವೊಂದರಲ್ಲಿ 1.25 ಕೋಟಿ ರೂಪಾಯಿ ಪರಿಹಾರವನ್ನು ವಿಮಾ ಸಂಸ್ಥೆಯ ಮೂಲಕ ಕೊಡಿಸಲಾಗಿದೆ.

20 ವರ್ಷಕ್ಕೂ ಹಳೆಯ ಕೇಸ್ಗಳು ಇತ್ಯರ್ಥ: ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದ 23 ವರ್ಷ ಹಳೆಯ ಆಸ್ತಿ ಪಾಲಿನ ಕುರಿತಾದ ದಾವೆ ಹಾಗೂ ಬಳ್ಳಾರಿಯ ಹೊಸಪೇಟೆ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇದ್ದ 22 ವರ್ಷ ಹಳೆಯ ಆಸ್ತಿ ವಿಭಜನೆಯ ದಾವೆಯನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ.

ವಿಲೇವಾರಿಯಾದ ಇತರ ಪ್ರಕರಣಗಳ ವಿವರ

• ಕಂದಾಯ ಇಲಾಖೆ ಪ್ರಕರಣಗಳು: 4,14,202

• ಬ್ಯಾಂಕ್ ವಸೂಲಾತಿ: 14,723 ಪ್ರಕರಣಗಳು, 157 ಕೋಟಿ ರೂಪಾಯಿ ವಸೂಲಿ

• ಚೆಕ್ ಬೌನ್ಸ್ ಕೇಸ್’ಗಳು: 10,766

• ಆಸ್ತಿ ವಿಭಜನೆ ದಾವೆ: 2,724

• ಎಕ್ಸಿಕ್ಯೂಷನ್ ಪ್ರಕರಣಗಳು: 4,723 ಪ್ರಕರಗಳು, 221 ಕೋಟಿ ರೂಪಾಯಿ ಪರಿಹಾರ

• ಕೆ-ರೇರಾ ಹಾಗೂ ಕೆ-ರೀಟ್: ಒಟ್ಟು 116 ಪ್ರಕರಣಗಳು, 6 ಕೋಟಿ ರೂಪಾಯಿ ಪರಿಹಾರ

• ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ: 192 ಪ್ರಕರಣಗಳು, 7 ಕೋಟಿ ರೂಪಾಯಿ ಪರಿಹಾರ