ಮನೆ ದೇವಸ್ಥಾನ ಹೊನ್ನಾವರದ ಚೆನ್ನಕೇಶವ ದೇವಾಲಯ

ಹೊನ್ನಾವರದ ಚೆನ್ನಕೇಶವ ದೇವಾಲಯ

0

ಹಾಸನ ತಾಲೂಕು ದುದ್ದ ಹೋಬಳಿಯ ಹೊನ್ನಾವರ, ಗ್ರಾಮ ಪಂಚಾಯ್ತಿಯ ಕೇಂದ್ರ. ಹಾಸನದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ 860 ವರ್ಷಗಳ ಸುದೀರ್ಘ ಇತಿಹಾಸ ಇರುವ ಭವ್ಯವಾದ ಶ್ರೀಪ್ರಸನ್ನಚೆನ್ನಕೇಶವ ದೇವಾಲಯವಿದೆ.

ದೇವಾಲಯ ಸಹಜ ಹೊಯ್ಸಳ ಶೈಲಿಯಲ್ಲಿದ್ದು, ಮುಖಮಂಟಪ, ನವರಂಗ, ಅಂತರಾಳ, ಗರ್ಭಗೃಹಗಳನ್ನು ಒಳಗೊಂಡಿದೆ. ನವರಂಗದ ಮೇಲ್ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬು ಶಿಲ್ಪಗಳಿವೆ. ದೇವಾಲಯದ ಪ್ರವೇಶ ದ್ವಾರದ ಮತ್ತು ಗರ್ಭಗೃಹದ ಮೇಲ್ಭಾಗದಲ್ಲಿ ಅಪರೂಪದ ದ್ವಾರಲಕ್ಷ್ಮಿಯ ವಿಗ್ರಹವಿದೆ. ಎರಡು ಆನೆಗಳು ಲಕ್ಷ್ಮಿಯ ಪಾದಕ್ಕೆ ನಮಿಸುತ್ತಿದ್ದರೆ, ಚಾಮರ ಧಾರಣಿಯರು ಚಾಮರ ಸೇವೆ ಮಾಡುತ್ತಿರುವ ಈ ಶಿಲ್ಪ ಮೋಹಕವಾಗಿದೆ. ತುದಿಯಲ್ಲಿ ಎರಡು ಸಿಂಹಗಳ ಭಂಗಿ ವಿಶೇಷವಾಗಿದೆ.

ಈ ದೇಗುಲದ ಮುಂದಿರುವ 50 ಸಾಲುಗಳ ಶಾಸನದ ರೀತ್ಯ ಈ ದೇವಾಲಯವನ್ನು ಕ್ರಿ.ಶ.1149ರ ವಿಭವ ಸಂವತ್ಸರದ ಮಾಘಶುದ್ಧ ತ್ರಯೋದಶಿಯ ಶನಿವಾರ ರೋಹಿಣಿ ನಕ್ಷತ್ರದಲ್ಲಿ ಲೋಕಾರ್ಪಣೆ ಮಾಡಲಾಗಿದೆ.

ದೇವಾಲಯವು ಗ್ರಾಮದ ಹೊರಗೆ ಇರುವ ಕೆರೆಗೆ ಹೊಂದಿಕೊಂಡಂತಿದ್ದು, ಇಲ್ಲಿರುವ ದಾನ ಶಾಸನದಲ್ಲಿ ಹೊಯ್ಸಳ ಸಾಮ್ರಾಜ್ಯವನ್ನು ಶತ್ರುಗಳ ಹಿಡಿತದಿಂದ ಬಿಡಿಸಿ ಹೊಯ್ಸಳ ಚಕ್ರವರ್ತಿ 1ನೇ ನರಸಿಂಹನ ಪಟ್ಟಾಭಿಷೇಕಕ್ಕೆ ಕಾರಣನಾದ ಮಹಾಪ್ರಧಾನ ಹೆಗ್ಗಡೆ ಲಕ್ಷ್ಮಯ್ಯ ದೇವಾಲಯಕ್ಕೆ ಬಿಟ್ಟುಕೊಟ್ಟ ದಾನದ ವಿವರಣೆ ಇದೆ.

ಶಾಸನ ಧ್ಯಾನ ಶ್ಲೋಕದಲ್ಲಿ ಮೂರು ಲೋಕಗಳಲ್ಲೂ ಪೂಜಿತನಾದ ಸರ್ವಕರ್ಮಗಳಿಗೂ ಮತ್ತು ಅವುಗಳ ಫಲಾಫಲಗಳಿಗೂ ಸಾಕ್ಷೀಭೂತನಾದ ಆ ಪರಮಾತ್ಮ ಕೇಶವ ಅಥವಾ ಶಿವನನ್ನು ನಿತ್ಯವೂ ನಮಸ್ಕರಿಸುತ್ತೇನೆ ಎಂಬ ಸಾಲುಗಳಿವೆ.

ದಾನಶಾಸನದ ಅಂತಿಮ ಚರಣದಲ್ಲಿ ತಾನು ದೇವಾಲಯಕ್ಕೆ ನೀಡಿರುವ ದಾನ ಶಾಶ್ವತವಾಗಿದ್ದು, ಯಾರಿಂದಲೂ ಅಪಹರಿಸಲ್ಪಡದೆ ಪರಮಾತ್ಮನ ಸೇವೆಗೆ ಅರ್ಪಿತವಾಗಲಿ ಎಂದು ಸ್ಪಷ್ಟಪಡಿಸಿದೆ. ಈ ದಾನವನ್ನು ಅಪಹರಿಸುವ ವ್ಯಕ್ತಿ 60 ಸಾವಿರ ವರ್ಷಗಳ ಕಾಲ ಕ್ರಿಮಿಯಾಗಿ ಭೂಮಿಯಲ್ಲಿ ಹುಟ್ಟುತ್ತಾನೆ ಎಂಬ ಎಚ್ಚರಿಕೆಯೂ ಇದೆ. ಅಂದರೆ 800 ವರ್ಷಗಳ ಹಿಂದೆಯೇ ನಮ್ಮಲ್ಲಿ ದೇವರ ಭೀತಿಯೂ ಇಲ್ಲದೆ, ಸ್ವಾರ್ಥಿಗಳು ದೇವಾಲಯದ ಜಮೀನನ್ನೇ ಕಬಳಿಸುತ್ತಿದ್ದರು ಎಂಬುದು ವೇದ್ಯವಾಗುತ್ತದೆ.

ಇಷ್ಟು ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ದೇವಾಲಯದ ಗೋಡಿಗಳು ಹಲವೆಡೆ ಉರುಳಿವೆ. ದೇವಾಲಯದ ಸುತ್ತಲೂ ಕಾಡುಗಿಡಗಳು ಬೆಳೆದು ಹೊರಭಿತ್ತಿಯಲ್ಲಿರುವ ಸುಂದರ ಶಿಲ್ಪ ಕಾಣದಂತೆ ಮರೆ ಮಾಚಿವೆ. ದೇವಾಲಯದ ಗೋಪುರ ಕುಸಿದುಬಿದ್ದಿದೆ.

ಈಗ ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ, ಗ್ರಾಮಸ್ಥರ ಸಭೆ ನಡೆಸಿ ಐತಿಹಾಸಿಕ ದೇವಾಲಯವನ್ನು ಉಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ.

ಜುಲೈ ತಿಂಗಳ 19ರಂದು ಗ್ರಾಮಸ್ಥರು ದೇವಾಲಯದ ಆವರಣವನ್ನು ಶುಚಿಗೊಳಿಸಿ, ದೇವಾಲಯದಲ್ಲಿರುವ ನಾರಾಯಣ, ಚನ್ನಕೇಶವನಿಗೆ ಪೂಜಾಕೈಂಕರ್ಯ ನೆರವೇರಿಸಿದ್ದಾರೆ. ಹೋಮ ಹವನಗಳು ನಡೆದಿವೆ. ದೇವಾಲಯದ ಜೀರ್ಣೋದ್ಧಾರಕ್ಕೆ ಸ್ಥಳದಲ್ಲೇ ಸಾರ್ವಜನಿಕರಿಂದ 25 ಸಾವಿರ ರೂಪಾಯಿ ದೇಣಿಗೆಯೂ ಸಂಗ್ರಹವಾಯಿತು. ಜನಜಾಗೃತಿಯ ಫಲವಾಗಿ ಇನ್ನು ಕೆಲವೇ ತಿಂಗಳುಗಳಲ್ಲಿ ಈ ದೇವಾಲಯ ಮತ್ತೆ ತನ್ನ ಹಿಂದಿನ ಸೊಬಗು ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.