ಮನೆ ರಾಜಕೀಯ ರೋಹಿಣಿ ಸಿಂಧೂರಿ ಎರಡು ಬಾರಿ ಸಂಧಾನಕ್ಕೆ ಬಂದಿದ್ದರು: ಸಾ ರಾ ಮಹೇಶ್

ರೋಹಿಣಿ ಸಿಂಧೂರಿ ಎರಡು ಬಾರಿ ಸಂಧಾನಕ್ಕೆ ಬಂದಿದ್ದರು: ಸಾ ರಾ ಮಹೇಶ್

0

ಮೈಸೂರು: ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಬಳಿಕ ಎರಡು ಬಾರಿ ಸಂಧಾನಕ್ಕೂ ಬಂದಿದ್ದರು ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.

ತಮ್ಮೊಂದಿಗೆ ರೋಹಿಣಿ ಸಿಂಧೂರಿ ಸಂಧಾನ ನಡೆಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಕುರಿತು ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸಾರಾ ಮಹೇಶ್ ಪ್ರತಿಕ್ರಿಯಿಸಿದ್ದಾರೆ.

ಅವರು ಡಿ.27ರಂದು ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಜೊತೆ ಬಂದಿದ್ದರು. ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ನನ್ನೊಂದಿಗೆ ಮಾತಕತೆ ನಡೆಸಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರ ಮೂಲಕ ಸಂಧಾನಕ್ಕೆ ಯತ್ನಿಸಿದ್ದಾರೆ. ಕೊನೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಮೂಲಕ ಸಂಧಾನಕ್ಕೆ ಬಂದಿದ್ದರು’ ಎಂದು ಹೇಳಿದರು.

ವೈಯುಕ್ತಿಕವಾಗಿ ತೆಗೆದುಕೊಂಡಿದ್ದು ನಾನಲ್ಲ. ನನ್ನ ಚೌಲ್ಟ್ರಿ ರಾಜಕಾಲುವೆ ಮೇಲೆ ಇಲ್ಲವೆಂದು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದಾರೆ. ಆದರೆ, ನಾನು ರೋಹಿಣಿ ವಿರುದ್ಧ ಮಾಡಿದ್ದ ಆರು ಆರೋಪಗಳ ಪೈಕಿ ನಾಲ್ಕು ಸಾಬೀತಾಗಿವೆ. ಜಿಲ್ಲೆಯಲ್ಲಿ ಕೋವಿಡ್‌’ನಿಂದಾದ ಸಾವು ಮುಚ್ಚಿಟ್ಟಿದ್ದು, ಪಾರಂಪರಿಕ ಕಟ್ಟಡ ದುರ್ಬಳಕೆ, ಈಜುಕೊಳ ಅಕ್ರಮವಾಗಿ ನಿರ್ಮಿಸಿದ್ದು ಮೊದಲಾದ ತಪ್ಪುಗಳು ಸಾಬೀತಾಗಿವೆ. ಈ ಬಗ್ಗೆ ಸರ್ಕಾರಕ್ಕೆ ದಾಖಲೆಗಳ ಸಹಿತ ದೂರು ಕೊಟ್ಟಿದ್ದೇನೆ. ಈಗ ರೋಹಿಣಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುವುದಿಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದು, ಬಿಡುವುದು ಸರ್ಕಾರದ ಅಂಗಳದಲ್ಲಿದೆ ಎಂದರು.