ಮನೆ ಮನರಂಜನೆ ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಇನ್ನಿಲ್ಲ

ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಇನ್ನಿಲ್ಲ

0

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ (95) ಸೋಮವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಸುಮಾರು 20 ವರ್ಷದಿಂದ ಹೃದಯದ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಸೋಮವಾರ ಬೆಳಗ್ಗೆ 6.10ರಲ್ಲಿ ಅವರು ನಿಧನರಾಗಿದ್ದಾರೆ.

ಭಗವಾನ್‌ ಅವರ ಪಾರ್ಥಿವ ಶರೀರವನ್ನು ಸಹಕಾರ ನಗರದಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 12ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ.

ಮಧ್ಯಾಹ್ನ 12.30ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಭಗವಾನ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗ, ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮೈಸೂರಿನಲ್ಲಿ ಜನಿಸಿದ್ದ ಎಸ್‌.ಕೆ.ಭಗವಾನ್‌ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕಗಳ ಮೂಲಕ ಬಣ್ಣದ ಬದುಕನ್ನು ಆರಂಭಿಸಿದ್ದ ಭಗವಾನ್‌, ‘ಭಾಗ್ಯೋದಯ’ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟರು. ಕ್ಯಾಮೆರಾಮೆನ್‌ ಆಗಿದ್ದ ದೊರೆರಾಜ್‌ ಜೊತೆಗೆ ಮದ್ರಾಸ್‌ ನಲ್ಲಿದ್ದುಕೊಂಡು, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ವರನಟ ಡಾ.ರಾಜ್‌ಕುಮಾರ್‌ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ದೊರೆ–ಭಗವಾನ್‌ ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿತ್ತು. ‘ಜೇಡರ ಬಲೆ’ ದೊರೆ–ಭಗವಾನ್‌ ಜೋಡಿಯ ನಿರ್ದೇಶನದ ಮೊದಲ ಸಿನಿಮಾ. ‘ಗೋವಾದಲ್ಲಿ ಸಿ.ಐ.ಡಿ 99’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’,‘ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ 999’, ‘ಗಿರಿಕನ್ಯೆ’, ‘ಎರಡು ಕನಸು’, ‘ನಾನೊಬ್ಬ ಕಳ್ಳ’ ಹೀಗೆ ರಾಜ್‌ಕುಮಾರ್‌ ಅಲ್ಲಿಂದ ಭಗವನ್ ತಮ್ಮ ಚೊಚ್ಚಲ ಚಿತ್ರ ಸಂಧ್ಯಾ ರಾಗವನ್ನು 1966 ರಲ್ಲಿ ನಿರ್ದೇಶಿಸಿದರು.

ಆದರೆ ಅಧಿಕೃತವಾಗಿ ಅದರ ನಿರ್ದೇಶನವನ್ನು ಎ.ಸಿ.ನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ. ಮುಂದಿನ ವರ್ಷ, ಅವರು ಎ.ಸಿ.ನರಸಿಂಹ ಮೂರ್ತಿಯವರೊಂದಿಗೆ ರಾಜದುರ್ಗದ ರಹಸ್ಯ 1967 ಚಿತ್ರದ ಸಹ ನಿರ್ದೇಶಕರಾಗಿ ಮನ್ನಣೆ ಪಡೆದರು. ದೊರೈ-ಭಗವಾನ್ ಎಂಬ ಹೆಸರಿನಲ್ಲಿ ದೊರೈ ರಾಜ್ ಜೊತೆಯಲ್ಲಿ ಅವರು ಜೇಡರ ಬಲೆ 1968 ನ್ನು ಸಹ-ನಿರ್ದೇಶಿಸಿದಾಗ ಅವರ ಅಧಿಕೃತ ನಿರ್ದೇಶನ ಪ್ರಾರಂಭವಾಯಿತು. ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರಗಳನ್ನು ಮಾಡಿದ ಮೊದಲ ನಿರ್ದೇಶಕ ಭಗವಾನ್.ರಾಜ್‌ಕುಮಾರ್ ಅವರನ್ನು ಹೊರತುಪಡಿಸಿ, ಈ ಜೋಡಿಯು ಅನಂತ್ ನಾಗ್ ಮತ್ತು ಲಕ್ಷ್ಮಿಯವರ ಜೊತೆಗೆ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಕಾದಂಬರಿಗಳ ಕಥೆಯಾಧರಿಸಿವೆ.

ದೊರೈ ರಾಜ್ ಅವರ ಮರಣದ ನಂತರ, ಭಗವಾನ್ ಅನೇಕ ವರ್ಷಗಳ ಕಾಲ ನಿರ್ದೇಶನವನ್ನು ನಿಲ್ಲಿಸಿದರು. ಅವರ ಕೊನೆಯ ಚಿತ್ರ 1996 ರಲ್ಲಿ ಬಾಳೊಂದು ಚದುರಂಗವಾಗಿದೆ. 2019 ರಲ್ಲಿ, ಅವರು 85 ನೇ ವಯಸ್ಸಿನಲ್ಲಿ ತಮ್ಮ ನಿರ್ದೇಶನದ 50 ನೇ ಚಲನಚಿತ್ರ ಆಡುವ ಗೊಂಬೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚಿನ ಸಿನಿಮಾ ಕಾರ್ಯಕ್ರಮಗಳಲ್ಲಿ ಭಗವಾನ್ ಭಾಗವಹಿಸುತ್ತಿದ್ದರು.

ಸಿಎಂ ಸಂತಾಪ: ’ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಕೆ. ಭಗವಾನ್ ರವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.