ಕೊಂಡಜ್ಜಿ ಹಾಸನ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಸೀಗೇಗುಡ್ಡ, ಗರುಡನಗಿರಿ ಹಾಗೂ ಚಂದ್ರದ್ರೋಣ ಪರ್ವತಗಳ ನಯನ ಮನೋಹರ ಪ್ರಕೃತಿ ರಮಣೀಯ ತಾಣದಲ್ಲಿರುವ ಈ ಗ್ರಾಮ ವರದರಾಜಸ್ವಾಮಿಯ ನೆಲೆವೀಡು.
ಹಾಸನದಿಂದ ಉತ್ತರಕ್ಕೆ 17 ಕಿಲೋ ಮೀಟರ್ ದೂರದಲ್ಲರುವ ಇಲ್ಲಿ ಶ್ರೀವರದರಾಜಸ್ವಾಮಿ ನೆಲೆನಿಂತ ಬಗ್ಗೆ ಹಾಗೂ ಈ ಊರಿಗೆ ಕೊಂಡಜ್ಜಿ ಎಂಬ ಹೆಸರು ಬಂದ ಬಗ್ಗೆ ಊರಿನಲ್ಲಿ ಜನಜನಿತವಾದ ಕಥೆ ಇದೆ.
ಹೊಯ್ಸಳರ ದೊರೆ ವಿಷ್ಣುವರ್ಧನ ತನ್ನ ಪತ್ನಿ ಶಾಂತಲೆಯ ಕೋರಿಕೆ ತೀರಿಸಲು ನಿಂತಿರುವ ಭಂಗಿಯ 18 ಅಡಿ ಎತ್ತರದ ಭವ್ಯವಾದ ಶ್ರೀವರದರಾಜಸ್ವಾಮಿ ವಿಗ್ರಹವನ್ನು ಮಾಡಿಸಿ ತಮಿಳುನಾಡಿನಿಂದ ಕುದುರೆಗಳ ಬಂಡಿಯಲ್ಲಿ ಬೇಲೂರಿಗೆ ತರಿಸಿದನಂತೆ. ಈ ಪ್ರತಿಮೆಯನ್ನು ಬೇಲೂರಿನ ಚೆನ್ನಕೇಶವ ದೇವಾಲಯದ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲು ಇಚ್ಛಿಸಿದ ಆದರೆ, ಗರ್ಭಗೃಹ ಚಿಕ್ಕದಾದ ಕಾರಣ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ.
ಹೀಗೆ ಪ್ರತಿಷ್ಠಾಪನೆ ಆಗದೆ ಪ್ರಾಕಾರದಲ್ಲೇ ಉಳಿದ ವಿಗ್ರಹವನ್ನು ಒಬ್ಬಳು ಅಜ್ಜಿ, ತನ್ನೂರಿನಲ್ಲಿ ಇದಕ್ಕೆ ತಾನೇ ದೇವಾಲಯ ಕಟ್ಟಿಸಿ ಪ್ರತಿಷ್ಠಾಪಿಸುವುದಾಗಿ ಕೋರಿಕೆ ಸಲ್ಲಿಸಿ, ಅದರ ನಿರ್ಮಾಣಕ್ಕೆ ತಗುಲಿದ್ದ ವೆಚ್ಚವನ್ನು ತಾನೇ ಭರಿಸಿ, ತನ್ನೂರಿಗೆ ತಂದು ಪ್ರತಿಷ್ಠಾಪಿಸಿ, ಪುಟ್ಟ ಗುಡಿ ಕಟ್ಟಿಸಿದಳಂತೆ, ವಿಗ್ರಹದ ವೆಚ್ಚ ಭರಿಸುವ ಮೂಲಕ ಅದನ್ನು ಕೊಂಡು ತಂದ ಅಜ್ಜಿಯ ಊರು ಕೊಂಡಜ್ಜಿ ಎಂದೇ ಖ್ಯಾತವಾಯಿತು ಎಂದು ಹೇಳಲಾಗುತ್ತದೆ. ಈ ಬಗ್ಗೆ ದೇವಾಲಯದ ಮುಂಭಾಗದಲ್ಲಿ ಫಲಕವನ್ನೂ ಹಾಕಲಾಗಿದೆ. ಆದರೆ ಈ ಕಥೆಯನ್ನು ಒಪ್ಪಲು ಹಲವರು ಸಿದ್ಧರಿಲ್ಲ. ಅದೇನೇ ಇರಲಿ, ಇಲ್ಲಿರುವ 18 ಅಡಿ ಎತ್ತರದ ವರದರಾಜ ಸ್ವಾಮಿ ವಿಗ್ರಹವಂತೂ ನಯನ ಮನೋಹರವಾಗಿದೆ. ಊರು ಕೊಂಡಜ್ಜಿ ಎಂದು ಅಧಿಕೃತ ಹೆಸರು ಪಡೆದಿದೆ.
ವರದರಾಜ ಸ್ವಾಮಿ ಅಥವಾ ಅಲ್ಲಾಳನಾಥ ವಿಷ್ಣುವಿನ 24 ದಿವ್ಯ ನಾಮಗಳಲ್ಲಿ ಒಂದು. ವರದರಾಜಸ್ವಾಮಿ ಜನಾರ್ದನನ ರೂಪವೆಂದು ಪುರಾಣಗಳು ಹೇಳುತ್ತವೆ. ಇಂಥ ಭವ್ಯ ಮೂರ್ತಿ ಇಲ್ಲಿ ನಿಂತಿರುವ ಭಂಗಿಯಲ್ಲಿದೆ. ಶಂಖ, ಚಕ್ರ, ಗದೆ ಮತ್ತು ಅಭಯ ಮುದ್ರೆಯನ್ನು ಹೊಂದಿರುವ ವಿಗ್ರಹದ ಬಲ ಎದೆಯ ಮೇಲೆ ಲಕ್ಷ್ಮೀ ವಿಗ್ರಹವಿದೆ. ಪ್ರತಿಮೆಯಲ್ಲಿನ ಕಿರೀಟ, ಯಜ್ಞೋಪವೀತ, ವಸ್ತ್ರ, ಒಡವೆಗಳಲ್ಲಿನ ಕುಸೂರಿ ಕೆತ್ತನೆ ಶಿಲ್ಪಿಯ ಕೈಚಳಕ ಮತ್ತು ಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ಸೊಂಟಕ್ಕೆ ಸ್ವಾಮಿ ಕಟ್ಟಿರುವ ಪೀತಾಂಬರದ ಉತ್ತರೀಯಕ್ಕೆ ಹಾಕಿರುವ ಗಂಟನ್ನು ಸಹ ನೈಜವಾಗಿ ಶಿಲ್ಪಿ ಮೂಡಿಸಿದ್ದಾನೆ.
ಮಂದಸ್ಮಿತ ನಗುಮುಖದ ಶಂಖ, ಚಕ್ರ, ಗದಾಧಾರಿಯಾದ ವರದರಾಜಸ್ವಾಮಿ ವಿಗ್ರಹ 11 ಅಡಿ ಎತ್ತರವಿದ್ದು, ನಾಲ್ಕು ಅಡಿಯ ಪಾಣಿಪೀಠದ ಮೇಲಿದೆ. ಪೀಠದ ಮೇಲೆ 2 ಅಡಿ ಎತ್ತರ ಕಮಲ ಕೆತ್ತನೆಯ ಮತ್ತೊಂದು ಪೀಠವಿದೆ. ಪಾಣಿಪೀಠದಲ್ಲಿ ಗರುಡನ ಉಬ್ಬು ಶಿಲ್ಪವೂ ಇದೆ. ಗರ್ಭಗೃಹದ ಮೇಲಿನ ಛಾವಣಿಯಲ್ಲಿ ನಂದಿಯ ಉಬ್ಬು ಶಿಲ್ಪವಿರುವುದು ವಿಶೇಷವಾಗಿದೆ. ಈ ವಿಗ್ರಹದ ಹಿಂದೆ ಹೊಯ್ಸಳ ಶೈಲಿಯ ಪ್ರಭಾವಳಿ ಇಲ್ಲದಿರುವುದೂ ಮತ್ತೊಂದು ವಿಶೇಷವಾಗಿದೆ. ಈ ಪ್ರತಿಮೆಯನ್ನು 14ನೇ ಶತಮಾನದಲ್ಲಿ ನಿರ್ಮಿಸಿರುವುದು ಇತಿಹಾಸದಿಂದ ತಿಳಿದುಬರುತ್ತದೆ. ಈ ಪುರಾತನ ದೇಗುಲಕ್ಕೆ ನೂರಾರು ವರ್ಷಗಳಿಂದಲೂ ಯಾವುದೇ ವಿಶಿಷ್ಟ ರಕ್ಷಣೆ ಇಲ್ಲದಿದ್ದರೂ, ಸ್ವಾಮಿ ತನ್ನ ಸೌಂದರ್ಯ ರಕ್ಷಿಸಿಕೊಂಡಿದ್ದಾನೆ. ಈ ದೇವಾಲಯ ಇಂದು ತೀರಾ ಶಿಥಿಲಾವಸ್ಥೆ ತಲುಪಿತ್ತು. ಗರ್ಭಗೃಹ ಕುಸಿದು ಬೀಳುವ ಹಂತಕ್ಕೆ ಬಂದಿತ್ತು. ಇಷ್ಟು ಮನೋಹರವಾದ ಅಪರೂಪದ ವಿಗ್ರಹವಿರುವ ಈ ದೇವಾಲಯ ಶಿಥಿಲವಾಗಿ ಬೀಳುವ ಭೀತಿ ಹುಟ್ಟಿಸಿತ್ತು. ಹೀಗಾಗಿ ಈಗ ದೇವಾಲಯದ ಪುನರ್ ನಿರ್ಮಾಣ ಮಾಡಲಾಗಿದೆ.
ಆದರೆ, ಈ ದೇವಾಲಯ ಕಲ್ಲಿನ ದೇವಾಲಯವಾಗಿ ರೂಪ ತಳೆಯುವ ಬದಲು, ಆಧುನಿಕ ಸಿಮೆಂಟ್ ಕಟ್ಟಡ ದೇವಾಲಯದ ಸ್ವರೂಪದಲ್ಲಿ ಪುನರ್ ನಿರ್ಮಾಣವಾಗಿರುವುದು ತುಸು ವ್ಯಥೆಯ ವಿಚಾರವಾದರೂ, ಗರ್ಭಗೃಹ ಕಲ್ಲಿನ ಕೆತ್ತನೆಗಳಿಂದ ಕೂಡಿದ ನಿರ್ಮಾಣವಾಗಿರುವುದು ನೆಮ್ಮದಿಯ ವಿಚಾರ. ಹೆಚ್ಚು ಪ್ರಚಾರಕ್ಕೆ ಬಾರದ ಈ ದೇವಾಲಯಕ್ಕೆ ಪ್ರಚಾರ ನೀಡಿದರೆ ಜಿಲ್ಲೆಯ ಮತ್ತೊಂದು ಜನಪ್ರಿಯ ಪ್ರವಾಸಿ ತಾಣ ಆಗುವುದರಲ್ಲಿ ಸಂದೇಶವಿಲ್ಲ. ಈ ದೇವಾಲಯಕ್ಕೆ 13 ಕಿ.ಮೀ. ದೂರದಲ್ಲಿ ಅತ್ಯಂತ ಮನೋಹರವಾದ ದೊಡ್ಡ ಗದ್ದವಳ್ಳಿಯ ಲಕ್ಷ್ಮೀ ದೇವಾಲಯವೂ ಇದೆ.