ಮೈಸೂರು: ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಂದ ಉಚಿತ ಮನರಂಜನೆ ಸಿಗುತ್ತಿದೆ. ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಸರ್ಕಾರ ಇಲ್ಲ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.
ಐಪಿಎಸ್ ರೂಪ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಜಗಜ್ಜಾಹೀರಾಗಿದೆ. ಈ ಸಂಬಂಧ ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಂ.ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಾನು ನರೇಂದ್ರ ಮೋದಿ, ಅಮಿತ್ ಶಾ ಅವರಲ್ಲಿ ಕೇಳಿಕೊಳ್ಳುತ್ತೇನೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ . ಇದರ ಅರ್ಥ ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಹಾಗೂ ನಾಲಾಯಕ್ ಮುಖ್ಯಮಂತ್ರಿ ಇದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಒಂದು ನೋಟಿಸ್ ಕೂಡ ಜಾರಿ ಮಾಡಿಲ್ಲ. ಈ ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮೂಲಕ ಲಂಚ ಪಡೆದು ಅವರನ್ನು ನೇಮಕ ಮಾಡಿದ್ದಾರೆ. ಆದ್ದರಿಂದ ಅವರನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ನಿನ್ನೆ ಗೃಹ ಸಚಿವ ಅರಗ ಜ್ಞಾನೇಂದ್ರ ಮೇಲ್ಮನೆಯಲ್ಲಿ ಒಂದು ಉತ್ತರ ಕೊಟ್ಟಿದ್ದಾರೆ . ಅನೇಕ ರೌಡಿಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. 10 ಮಂದಿ ರೌಡಿಗಳಿಗೆ ಎಂ.ಎಲ್. ಎ ಟಿಕೆಟ್ ಮತ್ತು 60 ಮಂದಿಗೆ ಬಿಬಿಎಂಪಿ ಟಿಕೆಟ್ ಕೊಡಲು ನಿರ್ಧಾರ ಮಾಡಿದ್ದಾರೆ. ಸೈಲೆಂಟ್ ಸುನೀಲ, ಬೆತ್ತನ ನಗರ ಶಂಕರ, ಸ್ಯಾಂಟ್ರೊ ರವಿ, ಸೈಕಲ್ ರವಿ ಸೇರಿದಂತೆ ಹಲವರು ಬಿಜೆಪಿಗೆ ಸೇರಿದ್ದಾರೆ. ಇದು ಬಿಜೆಪಿಯ ರೌಡಿ ಮೋರ್ಚಾ, ಗೂಂಡಾ ಮೋರ್ಚಾ ಕಾಂಗ್ರೆಸ್ ಅವರನ್ನು ಹೆದರಿಸಲು ಇವರೆಲ್ಲರೂ ತಯಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಂಸ ತಿಂದು ಸಿಟಿ ರವಿ ದೇವಸ್ತಾನಕ್ಕೆ ಹೋಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು ಪ್ರಚಾರ ಮಾಡಿದರು. ಅದೇ ಸಿಟಿ ರವಿ ನಿನ್ನೆ ಭಟ್ಕಳದಲ್ಲಿ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಮಾಂಸ ತಿಂದಿದ್ದಾರೆ. ಚಿಕನ್, ಮಟನ್, ಶಿಗಡಿ ಎಲ್ಲಾ ಮಾಂಸವನ್ನು ಜೊತೆಗೆ ಬೀಫ್ ಕೂಡ ತಿಂದಿದ್ದಾರೆ ಎಂದು ಅವರ ಕಡೆಯವರೇ ಹೇಳಿದ್ದಾರೆ. ಸ್ವತಃ ಅವರೇ ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ ಎಂದು ಹೇಳಿದ್ದಾರೆ. ಮಾಂಸ ತಿಂದು ದೇವಸ್ಥಾನ ಒಳಗೆ ಹೋಗಿದ್ದಾರೆ. ಸಿಟಿ ರವಿಗೆ ನಾಚಿಕೆಯಾಗಬೇಕು ಎಂದು ಎಂ.ಲಕ್ಷ್ಮಣ್ ಗುಡುಗಿದರು.