ಮೈಸೂರು: ಮೈಸೂರಿನ ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದ್ದು, ಹಲವು ಬಾರಿ ಗೆದ್ದು ಶಾಸಕರಾಗಿರುವ ಎಸ್.ಎ ರಾಮದಾಸ್ ಬಿಟ್ಟು ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟ ಒತ್ತಾಯಿಸಿದೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಡಿ.ಟಿ ಪ್ರಕಾಶ್, ಕೆ.ಆರ್ ಕ್ಷೇತ್ರ ಅತೀ ಹೆಚ್ಚು ಬ್ರಾಹ್ಮಣ ಸಮುದಾಯವಿರುವ ಕ್ಷೇತ್ರ. ಕ್ಷೇತ್ರದಲ್ಲಿ ಸುಮಾರು 75 ಸಾವಿರ ಬ್ರಾಹ್ಮಣ ವೋಟುಗಳಿವೆ. ಇಲ್ಲಿ ನಾವು ರಾಮದಾಸ್ ಅವರನ್ನು ಸಾಕಷ್ಟು ಬಾರಿ ಗೆಲ್ಲಿಸಿಕೊಟ್ಟಿದ್ದೇವೆ. ಆದರೆ ನಮ್ಮ ನಿರೀಕ್ಷೆಯಂತೆ, ಈಗಿನ ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ. ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಹಾಲಿ ಶಾಸಕ ಎಸ್.ಎ ರಾಮದಾಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಸಮುದಾಯದ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ. ನಾವು ಸಮಸ್ಯೆ ಈಡೇರಿಕೆಗೆ ಕಚೇರಿಗೆ ಹೋದಾಗ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ರಾಮದಾಸ್ ಅವರಿಗೆ ಇನ್ನೊಂದು ಉನ್ನತ ಸ್ಥಾನ ಕೊಡಿ ಅವರಿಗೆ ಬೇಡ ಅನ್ನೋದಿಲ್ಲ. ಕೆ.ಆರ್ ಕ್ಷೇತ್ರಕ್ಕೆ ಮಾತ್ರ ಬೇರೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಕೆ.ಆರ್ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆ ಮಾಡಿ. ಒಬ್ಬ ಸೂಕ್ತ ಮತ್ತು ವಿಪ್ರ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ಬಿಜೆಪಿ ಹೈ ಕಮಾಂಡ್’ಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಬ್ರಾಹ್ಮಣ ಸಮುದಾಯ ಮುಖಂಡ ರಘುರಾಮ್ ವಾಜಪೇಯಿ , ರಾಮದಾಸ್ ಅವರನ್ನು ಆರು ಬಾರಿ ನಿಲ್ಲಿಸಿ ನಾಲ್ಕು ಬಾರಿ ಗೆಲ್ಲಿಸಿದ್ದೇವೆ. ಎರಡು ಬಾರಿ ಪರಾಭವಗೊಂಡಿದ್ದಾರೆ. ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರಬಹುದು. ಆದರೆ,ಸಮುದಾಯ ದೃಷ್ಟಿಯಿಂದ ನಮ್ಮನ್ನ ಕಡೆಗಣಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಬೇರೊಬ್ಬ ವಿಪ್ರ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು. ಈಗಾಗಲೇ ನಾಲ್ಕೈದು ಜನ ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ರಾಜೀವ್ , ಶ್ರೀವತ್ಸ ಮೊದಲಾದವರಿದ್ದಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಲಿ. ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದಲ್ಲಿ ಬ್ರಾಹ್ಮಣ ಅಭ್ಯರ್ಥಿ ಕಣಕ್ಕಿಳಿಸಿದ್ರೆ ನಾವು ಸಂಘದ ಮುಖಂಡರ ಜೊತೆ ಚರ್ಚೆ ಮಾಡಿ ನಾವು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.