ಅಮೆರಿಕದ ಹಿಂಡೆನ್’ಬರ್ಗ್ ಸಂಶೋಧನಾ ಸಂಸ್ಥೆಯು ಅದಾನಿ ಸಮೂಹದ ಸಂಸ್ಥೆಗಳ ವಿರುದ್ಧ ಪ್ರಕಟಿಸಿರುವ ವರದಿ ಮತ್ತು ಆನಂತರ ಮಾರುಕಟ್ಟೆಯಲ್ಲಿ ಉಂಟಾಗಿರುವ ವಿಪ್ಲವಕ್ಕೆ ಸಂಬಂಧಿಸಿದ ವರದಿಗಾರಿಕೆ ಕುರಿತಾಗಿ ಮಾಧ್ಯಮಗಳಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಂ ಎಲ್ ಶರ್ಮಾ ಅವರು ಈ ವಿಚಾರವಾಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಕೋರಿದ್ದ ಮನವಿಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಗಮನಸೆಳೆದ ವೇಳೆ ಸಿಜೆಐ ಮೇಲಿನಂತೆ ಉತ್ತರಿಸಿದರು.
“ಮಾಧ್ಯಮಗಳ ವಿರುದ್ಧ ಯಾವುದೇ ಕಾರಣಕ್ಕೂ ನಾವು ಪ್ರತಿಬಂಧಕಾದೇಶ ಮಾಡುವುದಿಲ್ಲ. ಪ್ರಕರಣದ ಕುರಿತಾದ ಆದೇಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಸಿಜೆಐ ಸ್ಪಷ್ಟಪಡಿಸಿದರು.
ಹಿಂಡನ್ ವರ್ಗ ವರದಿ ಪ್ರಶ್ನಿಸಿ ಸಲ್ಲಿಸಿರುವ ನಾಲ್ಕು ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಫೆಬ್ರವರಿ 17ರಂದು ಆದೇಶ ಕಾಯ್ದಿರಿಸಿದೆ. ಹಿಂಡೆನ್’ಬರ್ಗ್ ವರದಿಯಿಂದ ಅದಾನಿ ಸಮೂಹವು 100 ಬಿಲಿಯನ್ ಡಾಲರ್ಗೂ ಅಧಿಕ ನಷ್ಟ ಅನುಭವಿಸಿದೆ. ಹಿಂಡೆನ್’ಬರ್ಗ್ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ನೇಥನ್ ಆಂಡರ್ಸನ್ ಮತ್ತು ಭಾರತದಲ್ಲಿರುವ ಅವರ ಸಹೋದ್ಯೋಗಿಗಳ ವಿರುದ್ಧ ಎಫ್’ಐಆರ್ ದಾಖಲಿಸಿ, ತನಿಖೆ ನಡೆಸಲು ಸೆಬಿ ಮತ್ತು ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಶರ್ಮಾ ಕೋರಿದ್ದಾರೆ. ಅಲ್ಲದೇ, ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಮಾಡಬೇಕೂ ಎಂದು ಮನವಿ ಮಾಡಿದ್ದಾರೆ.