ಮನೆ ಕಾನೂನು ಡಿಕೆಶಿ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತನಿಖೆ ತಡೆ ಆದೇಶ ತೆರವು ಕೋರಿ ಹೈಕೋರ್ಟ್’ಗೆ...

ಡಿಕೆಶಿ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತನಿಖೆ ತಡೆ ಆದೇಶ ತೆರವು ಕೋರಿ ಹೈಕೋರ್ಟ್’ಗೆ ಮನವಿ ಸಲ್ಲಿಸಿದ ಸಿಬಿಐ

0

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿ) ಅಧ್ಯಕ್ಷ, ಶಾಸಕ ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಸಿಬಿಐ ಕರ್ನಾಟಕ ಹೈಕೋರ್ಟ್’ಗೆ ಗುರುವಾರ ಮನವಿ ಸಲ್ಲಿಸಿದೆ.

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಪೀಠಕ್ಕೆ ತಡೆ ಆದೇಶ ತೆರವು ಕೋರಿದ ಮನವಿಯನ್ನು ಸಲ್ಲಿಸಿದರು. ಅಂತೆಯೇ, ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಪ್ರಸನ್ನಕುಮಾರ್ ಅವರು ಸಲ್ಲಿಸಿದರು. ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿದ ಪೀಠವು ತನಿಖಾ ಪ್ರಗತಿಯ ವರದಿಯನ್ನೂ ಅಂದೇ ಸಲ್ಲಿಸುವಂತೆ ಸೂಚಿಸಿತು.

ಸಿಬಿಐ ಮನವಿಯಲ್ಲಿ ಏನಿದೆ?: ಭ್ರಷ್ಟಾಚಾರ ನಿಗ್ರಹ ಕಾಯಿದೆ–1988ರ ಸೆಕ್ಷನ್ 19 (3) (ಸಿ) ಅನ್ನು 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅನುಸಾರ ತನಿಖೆಯನ್ನು ಯಾವುದೇ ನ್ಯಾಯಾಲಯ ತಡೆಯುವಂತಿಲ್ಲ. ಆದ್ದರಿಂದ, ಹೈಕೋರ್ಟ್ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಅರ್ಜಿದಾರರು ಎಫ್’ಐಆರ್’ನಲ್ಲಿ ಕುಟುಂಬದ ಸದಸ್ಯರ ಹೆಸರುಗಳು ಇಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಸೆಕ್ಷನ್ 13 (ಎ) (ಇ) ಅನ್ವಯ ಕುಟುಂಬದ ಸದಸ್ಯರೂ ನಿಶ್ಚಿತವಾಗಿ ಈ ಕಾಯಿದೆಯ ಅಡಿ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ. ಮೇಲಾಗಿ ತನಿಖೆಯ ವ್ಯಾಪ್ತಿಯನ್ನು ಇಂತಿಷ್ಟೇ ಮತ್ತು ಹೀಗೇ ಇರಬೇಕು ಎಂಬುದನ್ನು ಆರೋಪಿ ನಿಶ್ಚಿಯಿಸುವುದು ಸಮಂಜಸವಲ್ಲ ಎಂದು ವಿವರಿಸಲಾಗಿದೆ.

ಸಿಬಿಐ ಎಫ್’ಐಆರ್ ದಾಖಲು ಮಾಡಿ ಈಗಾಗಲೇ ಎರಡು ವರ್ಷಗಳಾಗಿವೆ. ಆದರೆ, ಅರ್ಜಿದಾರರು ಈಗ ಹೈಕೋರ್ಟ್ನಲ್ಲಿ ಆದೇಶವನ್ನು ಪ್ರಶ್ನಿಸುತ್ತಿದ್ದಾರೆ. ಅರ್ಜಿದಾರ ಆರೋಪಿ ಡಿ ಕೆ ಶಿವಕುಮಾರ್ ಸಂಬಂಧಿಯಾದ ಶಶಿಕುಮಾರ್ ಶಿವಣ್ಣ ಎಂಬುವರೂ ಈ ಹಿಂದೆ ಇದೇ ರೀತಿಯಲ್ಲಿ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್’ನ ಏಕಸದಸ್ಯ ಪೀಠವು ಈ ಅರ್ಜಿಯನ್ನು 2022ರ ಜುಲೈ 22ರಂದು ವಜಾಗೊಳಿಸಿತ್ತು. ನಂತರ ವಿಭಾಗೀಯ ಪೀಠ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು ಎಂಬ ಅಂಶವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.