ಮನೆ ಕೃಷಿ ಕೀಟನಾಶಕ ಹಾಗೂ ಎಲ್ಲ ರೀತಿಯ ಜೈವಿಕ ಉತ್ತೇಜಕಗಳಿಗೆ ಜಿಎಸ್‌’ಟಿಯಿಂದ ವಿನಾಯಿತಿಗೆ ಆಗ್ರಹ

ಕೀಟನಾಶಕ ಹಾಗೂ ಎಲ್ಲ ರೀತಿಯ ಜೈವಿಕ ಉತ್ತೇಜಕಗಳಿಗೆ ಜಿಎಸ್‌’ಟಿಯಿಂದ ವಿನಾಯಿತಿಗೆ ಆಗ್ರಹ

0

ಮೈಸೂರು: ಕೀಟನಾಶಕ ಮತ್ತು ಎಲ್ಲ ರೀತಿಯ ಜೈವಿಕ ಉತ್ತೇಜಕಗಳಿಗೆ ಜಿಎಸ್‌’ಟಿಯಿಂದ ವಿನಾಯಿತಿ ನೀಡುವಂತೆ ಮೈಸೂರು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟಗಾರರ ಸಂಘ ಆಗ್ರಹಿಸಿದೆ.

ಇಲ್ಲಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶದಲ್ಲಿ 17 ಒತ್ತಾಯಗಳನ್ನು ಮಂಡಿಸಲಾಯಿತು.

ಅನೇಕ ತಯಾರಕರು ಹಾಗೂ ಮಾರಾಟಗಾರರು ಹೊಸದಾಗಿ ಪರಿಚಯಿಸಿದ ನ್ಯಾನೊ ಉತ್ಪನ್ನಗಳು ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳು, ಸೂಕ್ಷ್ಮ ಪೋಷಕಾಂಷಗಳು ಮತ್ತು ನಿಧಾನವಾಗಿ ಮಾರಾಟವಾಗುವ ಉತ್ಪನ್ನದೊಂದಿಗೆ ಯೂರಿಯಾ, ಡಿಎಪಿಯಂತಹ ತಕ್ಷಣ ಮಾರಾಟವಾಗುವ ರಸಗೊಬ್ಬರಗಳನ್ನು ಜೋಡಿಸುತ್ತಿದ್ದಾರೆ. ಲಿಂಕ್ ಮಾಡಿ ಮಾರುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದ ನಮಗೂ ತೊಂದರೆ ಹಾಗೂ ರೈತರಿಗೂ ಹೊರೆ. ಹೀಗಾಗಿ, ಉತ್ಪನ್ನಗಳನ್ನು ಲಿಂಕ್ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಯಿತು.

ರಸಗೊಬ್ಬರ ಡೀಲರ್‌’ಗೆ ಸಿಗುವ ಲಾಭಾಂಶ ಬಹಳ ಕಡಿಮೆ ಇದ್ದು, ಇದನ್ನು ಕನಿಷ್ಠ ಶೇ 8ಕ್ಕೆ ಹೆಚ್ಚಿಸಬೇಕು. ‘ರಾಜ್ಯ ಪರವಾನಗಿ’ ಪಡೆಯುವ ವ್ಯವಸ್ಥೆಯಿಂದ ವಿನಾಯಿತಿ ಕೊಡಬೇಕು. ಪಿಒಎಸ್‌ ಯಂತ್ರವು ಪ್ರತಿ 30 ನಿಮಿಷಗಳಿಗೊಮ್ಮೆ ಡಿ–ಲಿಂಕ್ ಆಗುತ್ತದೆ. ಇದನ್ನು ಸರಾಸರಿ 2 ಗಂಟೆವರೆಗೆ ವಿಸ್ತರಿಸಬೇಕು. ರಸಗೊಬ್ಬರ ಪ್ಯಾಕಿಂಗ್‌’ನಲ್ಲಿ ಇತ್ತೀಚೆಗೆ ಬಳಸಲಾದ ಎಚ್‌ಡಿಪಿಇ ಚೀಲಗಳ ಗುಣಮಟ್ಟವು ಕಳಪೆಯಾಗಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸೋರಿಕೆ ಹಾಗೂ ವ್ಯರ್ಥವಾಗುವುದನ್ನು ತಪ್ಪಿಸಲು ಚೀಲಗಳ ಗುಣಮಟ್ಟ ಉತ್ತಮಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಎಂಎಫ್ಎಂಎಸ್ ವರದಿಯಲ್ಲಿ ವಿತರಕರು ಎಂಐಎಸ್ ವರದಿಯನ್ನು ವೀಕ್ಷಿಸಲು ಹಾಗೂ ರಸಗೊಬ್ಬರ ದಾಸ್ತಾನು ಲಭ್ಯತೆ ತಿಳಿದುಕೊಳ್ಳಲು ಹಿಂದಿನಂತೆಯೇ ನಮಗೂ ಅವಕಾಶ ಕೊಡಬೇಕು. ಮೈಸೂರು ಗೂಡ್ಸ್‌’ಶೆಡ್‌ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಬೇಕು. ನ್ಯಾನೊ, ಹೊಸ ಉತ್ಪನ್ನಗಳ ಪ್ರಚಾರದ ಕ್ಷೇತ್ರ ಪ್ರಯೋಗದ ಸ್ಥಳಗಳಿಗೆ ಮಾರಾಟಗಾರರನ್ನೂ ಆಹ್ವಾನಿಸಬೇಕು. ಟ್ರೇಡ್ ಲೈಸನ್ಸ್‌’ನಿಂದ ವಿನಾಯಿತಿ ಕೊಡಬೇಕು ಎಂದು ಕೋರಲಾಯಿತು.

ರಸಗೊಬ್ಬರ ಹಾಗೂ ಬಿತ್ತನೆಬೀಜ ತಯಾರಕರ ಪರವಾನಗಿಯ ಅವಧಿಯನ್ನು ಏಕರೂಪಗೊಳಿಸಬೇಕು. ತಯಾರಕರು ತಮ್ಮ ವಿತರಕರು, ಮಾರಾಟಗಾರರ ಪಟ್ಟಿಯನ್ನು ನೇರವಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ರಸಗೊಬ್ಬರ ಹಾಗೂ ಬಿತ್ತನೆಬೀಜ ಪರವಾನಗಿ ಅವಧಿಯನ್ನು 5 ವರ್ಷಗಳಿಂದ 10 ವರ್ಷಗಳವರೆಗೆ ಅಥವಾ ಶಾಶ್ವತವಾಗಿ (ಕೀಟನಾಶಕ ಪರವಾನಗಿಯಂತೆ) ವಿಸ್ತರಿಸಬೇಕು. ವಾರ್ಷಿಕ ಶುಲ್ಕದಿಂದ ವಿನಾಯಿತಿ ಕೊಡಬೇಕು. ಎಲ್ಲ ಮಾಸಿಕ ವರದಿಗಳನ್ನು ಆನ್‌’ಲೈನ್‌’ನಲ್ಲೇ ಸ್ವೀಕರಿಸಬೇಕು. ಆನ್‌’ಲೈನ್‌ ಹಾಗೂ ಚೈನ್‌ ಮಾರ್ಕೆಟಿಂಗ್ ಏಜೆನ್ಸಿಗಳನ್ನು ನಿಲ್ಲಿಸಬೇಕು. ಒಂದು ಕೀಟನಾಶಕ ಪರವಾನಗಿಗೆ ಎರಡು ಗೋದಾಮುಗಳನ್ನು ಸೇರಿಸಬೇಕು ಎಂದು ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಸಂಸದ ಪ್ರತಾಪ ಸಿಂಹ ಮಾತನಾಡಿ, ನ್ಯಾಯಸಮ್ಮತ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಬೇಡಿಕೆಗಳನ್ನು ಈಡೇರಿಸುವ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ನ್ಯಾನೊ ಗೊಬ್ಬರಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಬದಲಾವಣೆಗೆ, ಸುಧಾರಣೆಗೆ ಹಾಗೂ ತಂತ್ರಜ್ಞಾನಗಳಿಗೆ ನಾವೂ ಹೊಂದಿಕೊಳ್ಳಬೇಕಾಗುತ್ತದೆ. ಜಿಎಸ್‌’ಟಿ ತೆಗೆದರೆ ರಿಬೇಟ್ ಕ್ಲೇಮ್ ಮಾಡಲಾಗುವುದಿಲ್ಲ. ಸಾಧ್ಯವಾದಷ್ಟು ಕಡಿಮೆ ಮಾಡಿಸಲು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ತಿಳಿಸಿದರು.