ಮನೆ ರಾಜಕೀಯ ಗೆಲ್ಲುವ ಸಾಮರ್ಥ್ಯ ಇರುವವರಿಗೆ ಬಿಜೆಪಿ ಟಿಕೆಟ್: ಕೆ ಎಸ್ ಈಶ್ವರಪ್ಪ

ಗೆಲ್ಲುವ ಸಾಮರ್ಥ್ಯ ಇರುವವರಿಗೆ ಬಿಜೆಪಿ ಟಿಕೆಟ್: ಕೆ ಎಸ್ ಈಶ್ವರಪ್ಪ

0

ಮೈಸೂರು : ಕಾಂಗ್ರೆಸ್ ಜೆಡಿಎಸ್ ನಲ್ಲಿರುವ ಪರಿಸ್ಥಿತಿ ನಮ್ಮಲ್ಲಿಲ್ಲ. ಗೆಲ್ಲುವ ಸಾಮರ್ಥ್ಯ ಇರುವವರನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಟಿಕೆಟ್ ‌ನೀಡುವ ವಿಚಾರದಲ್ಲಿ ಕೇಂದ್ರ ರಾಜ್ಯದ ನಾಯಕರು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. 150 ಸೀಟು ಗೆಲ್ಲೋದು ನಮ್ಮ ಮುಖ್ಯ ಉದ್ದೇಶ. ಯಾರು ಸ್ಪರ್ಧೆ ಮಾಡ್ತಾರೆ ಎನ್ನೋದು ಮುಖ್ಯವಲ್ಲ‌. ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಎಲ್ಲಾ ತೀರ್ಮಾನ ಪಕ್ಷಕ್ಕೆ ಬಿಟ್ಟಿದ್ದು. ನಮ್ಮದು ಸಂಘಟನೆ ಆಧಾರಿತ ಪಕ್ಷವಾಗಿದೆ‌. ಚೇಲಾ, ಚಮಚಗಿರಿ, ಜಾತಿ, ದುಡ್ಡು ನಮ್ಮಲ್ಲಿ ನಡೆಯಲ್ಲ. ಎಂದು ಹೇಳಿದರು.

ಜನಮೆಚ್ಚಿದ, ದೇಶವನ್ನು ರಕ್ಷಣೆ ಮಾಡುವ ಪ್ರಭಾವಿ ನಾಯಕರು ಬಿಜೆಪಿಯಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿ, ಜೆಡಿಎಸ್ ನಲ್ಲಿ ಇಲ್ಲ. ಮೋದಿ, ಅಮಿತ್ ಶಾ ದೇಶದ ಜನರ ಮನಸು ಗೆದ್ದಿರುವ ನಾಯಕರು. ಅವರುಗಳನ್ನು ನಾವು ಕರೆಸುತ್ತೇವೆ. ನೀವು ಸಹ ಯಾರನ್ನು ಬೇಕಾದರೂ ಕರೆಸಿಕೊಳ್ಳಿ. ಬಿಜೆಪಿಯಲ್ಲಿ ರಾಜ್ಯದಲ್ಲೂ, ರಾಷ್ಟ್ರದಲ್ಲೂ ನಾಯಕರಿದ್ದಾರೆ. ಕಾಂಗ್ರೆಸ್ ನಲ್ಲಿ ಎರಡು‌ ಕಡೆಯೂ ನಾಯಕರಿಲ್ಲ. ಇದರಿಂದ ಇಷ್ಟು ಚುನಾವಣೆ ಸೋತಿದ್ದಾರೆ ಎಂದು ಹರಿಹಾಯ್ದರು.

ಸಚಿವ ಸ್ಥಾನ ನೀಡುವುದು ಹಾಗೂ ಟಿಕೆಟ್ ನೀಡುವುದು ಬಿಡುವುದು ಪಕ್ಷದ ತೀರ್ಮಾನ. ಎಲ್ಲರೂ ಮಂತ್ರಿಗಳು ಆಗಬೇಕೆಂದು ಬರೆದುಕೊಟ್ಟಿಲ್ಲ. 224 ಕ್ಷೇತ್ರಗಳ ಎಲ್ಲರೂ ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ನಾಳೆಯಿಂದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ

ನಾಳೆಯಿಂದ ನಾಲ್ಕು ತಂಡಗಳಲ್ಲಿ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಆರಂಭವಾಗಲಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಹೊರಡುವ ವಿಜಯಸಂಕಲ್ಪ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಚಾಲನೆ ನೀಡಲಿದ್ದಾರೆ. ನಾನು, ಕೋಟಾ ಶ್ರೀನಿವಾಸಪೂಜಾರಿ, ಅರಗ ಜ್ಞಾನೇಂದ್ರ, ವಿ ಸೋಮಣ್ಣ ಸೇರಿದಂತೆ ಇತರ ಪ್ರಮುಖ ನಾಯಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ನೌಕರರಿಗೆ ಬಿಜೆಪಿಯವರು ನೀಡಿದಷ್ಟು ಸೌಲಭ್ಯವನ್ನು ಬೇರೆ ಯಾರೂ ನೀಡಲಿಲ್ಲ. ಹೀಗಿದ್ದರೂ ಮುಷ್ಕರ ಮಾಡುತ್ತೇವೆ ಎಂದರೆ ಏನು ಹೇಳೋದು? ಎಂದು ಪ್ರಶ್ನಿಸಿದರು.