ಮನೆ ಯೋಗಾಸನ ಮಹಿಳೆಯರ ಆರೋಗ್ಯಕ್ಕೆ ಯೋಗಾಸನಗಳೇಕೆ ಮುಖ್ಯ?

ಮಹಿಳೆಯರ ಆರೋಗ್ಯಕ್ಕೆ ಯೋಗಾಸನಗಳೇಕೆ ಮುಖ್ಯ?

0

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಔಷಧಗಳಿಗಿಂತ ಯೋಗ, ಆಸನಗಳು ಹೆಚ್ಚು ಉಪಯುಕ್ತವಾಗಿವೆ. ನಿಯಮಿತ ಯೋಗಾಭ್ಯಾಸದಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹೀಗಾಗಿ ಯೋಗ ಎಲ್ಲರಿಗೂ ಮುಖ್ಯ. ಅದರಲ್ಲೂ ಹೆಣ್ಣುಕ್ಕಳಿಗೆ ಯೋಗ ಕೊಂಚ ಹೆಚ್ಚಿನ ಉಪಯೋಗವನ್ನೇ ನೀಡುತ್ತದೆ.

ಪುರುಷರಿಗಿಂತ ಒಂದು ಕೈ ಹೆಚ್ಚಿನ ಒತ್ತಡ, ದೇಹದ ಸೂಕ್ಷ್ಮತೆಯನ್ನು ಹೊಂದಿರುವ ಹೆಣ್ಣುಮಕ್ಕಳಿಗೆ ಯೋಗ ಎಷ್ಟು ಮುಖ್ಯ, ಯಾವೆಲ್ಲಾ ಅಭ್ಯಾಸಗಳು ಮಹಿಳೆಯರನ್ನು ಅನಾರೋಗ್ಯದಿಂದ ದೂರವಿಡುತ್ತದೆ ಎನ್ನುವ ಬಗ್ಗೆ ಯೋಗ ಶಿಕ್ಷಕಿ ಆಭರಣ ಅವರು ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

ಪಿಸಿಓಡಿ/ಪಿಸಿಓಎಸ್ ಸಮಸ್ಯೆಗೆ ಪರಿಹಾರ

ಬಹುತೇಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಎಂದರೆ ಅದು ಪಿಸಿಓಡಿ ಅಥವಾ ಪಿಸಿಓಎಸ್ ಸಮಸ್ಯೆ. ಅನಿಯಮಿತ ಮುಟ್ಟಿನ ದಿನಗಳು, ಗರ್ಭಾವಸ್ಥೆಯ ಸಮಸ್ಯೆ, ತಲೆನೋವು, ಅತಿಯಾದ ದೇಹದ ತೂಕ ಪಿಸಿಓಡಿಯಿಂದ ಕಾಣಿಸಿಕೊಳ್ಳುತ್ತವೆ.

ಇದರ ನಿವಾರಣೆಗೆ ಯೋಗಾಸನಗಳು ಅತ್ಯುತ್ತಮ ಪರಿಹಾರವಾಗಿದೆ. ಭುಜಂಗಾಸನ, ಬಾಲಾಸನ, ವಜಸ್ರಾಸನ ಸೇರಿದಂತೆ ಅನೇಕ ವ್ಯಾಯಾಮಗಳು ಹಾಗೂ ಪ್ರಾಣಾಯಾಮ, ಮುದ್ರೆಗಳು ಕೂಡ ಪಿಸಿಓಎಸ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆದರೆ ನಿಯಮಿತ ಅಭ್ಯಾಸ ಮುಖ್ಯವಾಗಿರುತ್ತದೆ.

ಒತ್ತಡ ನಿವಾರಣೆಗೆ

ಪ್ರತೀ ಹೆಣ್ಣು ಮನೆ, ಮಕ್ಕಳು, ಉದ್ಯೋಗ ಎಲ್ಲವನ್ನೂ ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಮಾನಸಿಕ ಸ್ಥಿತಿಯನ್ನು ಸ್ತಿಮಿತದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

ತಾಳ್ಮೆ, ಏಕಾಗ್ರತೆ ಮಹಿಳೆಯರಲ್ಲಿ ಅಗತ್ಯವಾಗಿ ಇರಬೇಕು. ಹೀಗಾಗಿ ಯೋಗ, ಪ್ರಾಣಾಯಾಮ ಹೆಚ್ಚು ಉಪಯುಕ್ತವಾಗಿದೆ. ಇದರಿಂದ ಮಾನಸಿಕವಾಗಿ ಒತ್ತಡ ಮುಕ್ತವಾಗಿರಬಹುದು.

ಗರ್ಭಾವಸ್ಥೆಯಲ್ಲಿ ಯೋಗಾಸನ

ಗರ್ಭಧಾರಣೆಯ ದಿನದಿಂದಲೂ ಯೋಗಾಸನವನ್ನು ಅಭ್ಯಾಸ ಮಾಡಿಕೊಂಡಿದ್ದರೆ ಪ್ರಸವದ ಸಮಯದಲ್ಲಿ ಹೆಚ್ಚು ಪ್ರಯೋಜನವನ್ನು ಕಾಣಬಹುದು.

ಯೋಗ ತರಬೇತಿಯನ್ನು ನುರಿತ ತಜ್ಞರಿಂದ ಪಡೆದುಕೊಂಡರೆ ಒಳ್ಳೆಯದು ಎನ್ನುತ್ತಾರೆ ಆಭರಣ. ಯೋಗಾಸನದಿಂದ ದೇಹದ ಸ್ನಾಯುಗಳು ಸಡಿಲೊಗೊಳ್ಳುತ್ತವೆ. ಪೆಲ್ವಿಕ್ ಮಸಲ್ಸ್ನ್ನು ಸಡಿಲಗೊಳಿಸಿ ಹೆರಿಗೆ ಸಹಜವಾಗಿ ಆಗಲು ಯೋಗಾಸನಗಳು ಸಹಕಾರಿಯಾಗಿವೆ.

ಯೋಗ ಮತ್ತು ಜೀವನಶೈಲಿ

ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗಾಸನ ಎಷ್ಟು ಮುಖ್ಯವೋ ಅಷ್ಟೇ ನಾವು ಸೇವನೆ ಮಾಡುವ ಆಹಾರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಯೋಗಾಸನದಿಂದ ರೋಗಗಳು ಕಡಿಮೆಯಾಗುವುದಿಲ್ಲ. ಬದಲಾಗಿ ನಿಯಂತ್ರಣದಲ್ಲಿರುತ್ತದೆ.

ಹೀಗಾಗಿ ರೋಗವನ್ನು ಬರದಂತೆ ತಡೆಯಲು ಯೋಗಾಸನಗಳು ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಹಸಿರು ತರಕಾರಿಗಳ ಸೇವನೆ, ಸಕ್ಕರೆ ಮತ್ತು ಸಂಸ್ಕರಿತ ಸಕ್ಕರೆಗಳ ಸೇವನೆಯನ್ನು ಕಡಿಮೆ ಮಾಡುವುದು, ಜಂಕ್ ಫುಡ್ಗಳಿಂದದೂ ಇರುವುದು ಯೋಗಕ್ಕೆ ಪೂರಕವಾದ ಆಹಾರವಾಗಿದೆ. ಇಂತಹ ಅಭ್ಯಾಸಗಳಿಂದ ಯೋಗದ ಪೂರ್ಣ ಪ್ರಯೋಜನ ಪಡೆಯಬಹುದು ಎಂದು ಸಲಹೆ ನೀಡುತ್ತಾರೆ ಯೋಗ ಶಿಕ್ಷಕಿ ಆಭರಣ.

ಶವಾಸನ ಎಷ್ಟು ಮುಖ್ಯ?

ನಿಯಮಿತವಾಗಿ ಯೋಗದ ಅಭ್ಯಾಸವಿದ್ದರೆ 40 ರಿಂದ 45 ನಿಮಿಷಗಳ ಕಾಲ ಯೋಗ ಮಾಡಿದ ಮೇಲೆ 5 ನಿಮಿಷವಾದರೂ ಶವಾಸನವನ್ನು ಮಾಡಲೇಬೇಕು.

ಶವಾಸನ ಇಡೀ ದೇಹಕ್ಕೆ ರಿಲಾಕ್ಸ್ ಮೂಡ್ ನೀಡುತ್ತದೆ. ಜೊತೆಗೆ ಶರೀರದ ಎಲ್ಲಾ ಭಾಗಗಳಿಗೆ ರಕ್ತಸಂಚಾರ ಸರಿಯಾಗಿ ಅಗುವಂತೆ ಮಾಡುತ್ತದೆ. ಹೀಗಾಗಿ ಯೋಗಾಭ್ಯಾಸ ಮಾಡಿದ ನಂತರ ಶವಾಸನ ಮಾಡುವುದು ಮಹತ್ವವಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಯೋಗದ ಅಭ್ಯಾಸ ದೇಹದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಸುಡಬಹುದು. ಹೀಗಾಗಿ ಶವಾಸನ ದೇಹವನ್ನು ಆರಾಮದಾಯಕ ಸ್ಥಿತಿಗೆ ತರುವಲ್ಲಿ ಸಹಾಯ ಮಾಡುತ್ತದೆ.