ಮನೆ ಕಾನೂನು ರಸ್ತೆ ರಂಪ: ಮುಸ್ಲಿಂ ವ್ಯಕ್ತಿಗೆ ದಿನಕ್ಕೆ 5 ಬಾರಿ ನಮಾಜ್ ಮಾಡಲು, 2 ಮರ ನೆಡಲು...

ರಸ್ತೆ ರಂಪ: ಮುಸ್ಲಿಂ ವ್ಯಕ್ತಿಗೆ ದಿನಕ್ಕೆ 5 ಬಾರಿ ನಮಾಜ್ ಮಾಡಲು, 2 ಮರ ನೆಡಲು ಮಾಲೆಗಾಂವ್ ನ್ಯಾಯಾಲಯದ ಆದೇಶ

0

ರಸ್ತೆ ರಂಪ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ಇತ್ತೀಚೆಗೆ ಘೋಷಿಸಿದ ಮಹಾರಾಷ್ಟ್ರದ ಮಾಲೆಗಾಂವ್ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಜೈಲು ಶಿಕ್ಷೆಗೆ ಬದಲಾಗಿ ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತೆ ಮತ್ತು ಎರಡು ಮರ ನೆಡುವಂತೆ ಸೂಚಿಸಿ ಅಪರಾಧಿಯನ್ನು ಬಿಡುಗಡೆ ಮಾಡಿದೆ.

 [ಸರ್ಕಾರಮತ್ತು ರೂಫ್ ಖಾನ್ ನಡುವಣ ಪ್ರಕರಣ].

ಅಪರಾಧ ಮರುಕಳಿಸದಂತೆ ವಾಗ್ದಂಡನೆ ಅಥವಾ ಸೂಕ್ತ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು 1958ರ ಅಪರಾಧಿಗಳ ಪರಿವೀಕ್ಷಣಾ ಕಾಯಿದೆಯ 3ನೇ ಪರಿಚ್ಛೇದ ಮ್ಯಾಜಿಸ್ಟ್ರೇಟ್’ಗೆ ಅಧಿಕಾರ ನೀಡುತ್ತದೆ ಎಂದು ನ್ಯಾಯಾಧೀಶರಾದ ತೇಜ್ವಂತ್ ಸಿಂಗ್ ಸಂಧು ತಿಳಿಸಿದ್ದಾರೆ.

ಕೇವಲ ಎಚ್ಚರಿಕೆ ನೀಡಿದರೆ ಸಾಲದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅಪರಾಧಿ ಕೃತ್ಯವನ್ನು ಪುನರಾವರ್ತಿಸದಂತೆ ಆತ ನ್ಯಾಯಾಲಯ ನೀಡಿದ ಎಚ್ಚರಿಕೆ ಮತ್ತು ಶಿಕ್ಷೆಯನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತರ್ಕಿಸಿತು.

ಈ ಹಿನ್ನೆಲೆಯಲ್ಲಿ ಅಪರಾಧ ಎಸಗಿದ ಸೋನಾಪುರ ಮಸೀದಿಯ ಆವರಣದಲ್ಲಿ ಎರಡು ಮರಗಳನ್ನು ನೆಡಲು ಮತ್ತು ಅವುಗಳನ್ನು ಪೋಷಿಸಲು ನ್ಯಾಯಾಲಯ ಆದೇಶಿಸಿತು.

ತಾನು ಇಸ್ಲಾಂ ಧರ್ಮದ ಅನುಯಾಯಿಯಾದರೂ ನಿಯಮಿತವಾಗಿ ನಮಾಜ್ ಮಾಡುತ್ತಿಲ್ಲ ಎಂದು ಆರೋಪಿ ನ್ಯಾಯಾಲಯಕ್ಕೆ ತಿಳಿಸಿದ್ದ. ಇದನ್ನು ಪರಿಗಣಿಸಿ ಮುಂದಿನ 21 ದಿನಗಳವರೆಗೆ ದಿನಂಪ್ರತಿ ಐದು ಬಾರಿ ನಮಾಜ್ ಮಾಡಲು ಅಪರಾಧಿಗೆ ನ್ಯಾಯಾಲಯ ಆದೇಶಿಸಿತು.

ಈ ಎರಡು ನಿರ್ದೇಶನಗಳು 1958ರ ಕಾಯಿದೆಯ ಸೆಕ್ಷನ್ 3ರ ವ್ಯಾಪ್ತಿಯೊಳಗೆ ಬರುತ್ತವೆ ಆದ್ದರಿಂದ ಸೂಕ್ತ ಸೂಚನೆಯಾಗಿ ಇದನ್ನು ಅರ್ಥೈಸಿಕೊಳ್ಳಬಹುದು ಎಂದು ಮ್ಯಾಜಿಸ್ಟ್ರೇಟ್ ತೀರ್ಪು ನೀಡಿದರು.

ರಸ್ತೆ ಅಪಘಾತವಾದ ಬಳಿಕ 30 ವರ್ಷದ ಅಪರಾಧಿಯು 2010ರಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ. ಆತನ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಶಾಂತಿ ಭಂಗ ಉಂಟುಮಾಡುವಂತಹ ಉದ್ದೇಶಪೂರ್ವಕ ಅಪಮಾನ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಪರಾಧಿ ಸೆಕ್ಷನ್ 323ರ ಅಡಿ ತಪ್ಪಿತಸ್ಥ ಎಂದ ಮ್ಯಾಜಿಸ್ಟ್ರೇಟ್ ಅವರು ಉಳಿದ ಅಪರಾಧಗಳಿಂದ ಆತನನ್ನು ಖುಲಾಸೆಗೊಳಿಸಿದರು.