ಮನೆ ರಾಜ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

0

ಬೆಳಗಾವಿ: ಜಿಲ್ಲೆಯಲ್ಲಿ ಕಾಂಗ್ರೆಸ್‌– ಬಿಜೆಪಿ ನಡುವೆ ಪ್ರತಿಷ್ಠೆಗೆ ಕಾರಣವಾದ, ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಲೋಕಾರ್ಪಣೆ ಮಾಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಆರ್.ಐ.ಡಿ.ಎಲ್, ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಗುರುವಾರ ರಾಜಹಂಸಗಡ ಕೋಟೆ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ನಗಾರಿ ಬಾರಿಸಿ, ಪುಷ್ಪಾರ್ಚಣೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶ ಕಂಡ ಅಪ್ರತಿಮ ನಾಯಕ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಕೆಚ್ಚೆದೆಯ ಹೋರಾಟ ಮಾಡಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಸಂತಸ ತಂದಿದೆ. ರಾಜಹಂಸಗಡ ಕೋಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕೋಟೆ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಭವನ, ವಿಶ್ರಾಂತಿ ಗೃಹ ನಿರ್ಮಾಣ ಜೊತೆಗೆ ಇತರ ಮೂಲಭೂತ ಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ತಿಳಿಸಿದರು.

ರಾಜಹಂಸಗಡ ಕೋಟೆಯ ಅಭಿವೃದ್ಧಿಗೆ 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 14 ಕೋಟಿ ಮಂಜೂರು ಮಾಡಿದ್ದರು. ಆಗ ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದರು. ಶಾಸಕ ಸಂಜಯ ಪಾಟೀಲ ಅವರ ಪ್ರಯತ್ನದ ಫಲವಾಗಿ ಕೋಟೆಯ ಆವರಣದಲ್ಲಿ ಮೂಲಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದರು.

ರಾಜಹಂಸ ಅದ್ಭುತ ಕೋಟೆ ಅದ್ಭುತವಾಗಿದೆ. ಶಿವಾಜಿ ಮಹಾರಾಜರ ಕಾಲದ ಗತವೈಭವ, ಸಂಸ್ಕೃತಿ ಸಾರುವ ಕೋಟೆಯಾಗಿದೆ. ಶಿವಾಜಿ ಮಹಾರಾಜರ ವ್ಯಕ್ತಿತ್ವದ ತಕ್ಕ ಹಾಗೆ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದೂ ಹೇಳಿದರು.

ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ನಾಯಕ. ಉತ್ತರ ಭಾರತ ಮೊಗಲರು ಆಡಳಿತದಲ್ಲಿ ಸಿಲುಕಿದ ಸಂದರ್ಬದಲ್ಲಿ ಹಿಂದೂ ಸಾಮ್ರಾಜ್ಯ ಕಟ್ಟಲು, ಮೊಗಲರ ದೊಡ್ಡ ಸಾಮ್ರಾಜ್ಯದ ವಿರುದ್ಧ ಹೋರಾಡಿದರು. ಎದೆಯಲ್ಲಿನ ಧೈರ್ಯ ಹಾಗೂ ತೋಳಲ್ಲಿನ ಬಲವೇ ನಮ್ಮ ಹೋರಾಟಕ್ಕೆ ಸಾಕು ಎಂಬ ಶಿವಾಜಿ ಅವರ ಸಾಹಸ ಅಪ್ರತಿಮವಾದದ್ದು ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ರಮೇಶ ಜಾರಕಿಹೊಳಿ, ಅನೀಲ್‌ ಬೆನಕೆ, ಅಭಯ ಪಾಟೀಲ, ಪ್ರಾದೇಶಿಕ ಆಯುಕ್ತರಾದ ಎಂ.ಜಿ ಹಿರೇಮಠ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.