ಬೆಂಗಳೂರು/ಮೈಸೂರು: ಕೋವಿಡ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಕೆಎಸ್’ಐಸಿ ಪ್ರಸಕ್ತ ವರ್ಷ 31 ಕೋಟಿ ರೂಪಾಯಿ ಲಾಭಗಳಿಸಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಕರ್ನಾಟಕ ರೇಷ್ಮೆ ಕೈಗಾರಿಕಾ ಸಂಸ್ಥೆಯು 2021-2022 ನೇ ಆರ್ಥಿಕ ವರ್ಷದಲ್ಲಿ 204.77 ಕೋಟಿ ವಹಿವಾಟು ನಡೆಸಿದ್ದು, 31.64 ಕೋಟಿ ಲಾಭಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 153.59 ಕೋಟಿ ವಹಿವಾಟು ನಡೆಸಿ 27.72 ಕೋಟಿ ಲಾಭ ಗಳಿಸಿತ್ತು.
ಮೈಸೂರು ರೇಷ್ಮೆ ಸೀರೆಗೆ ತನ್ನದೇ ಬ್ರಾಂಡ್ ಇದೆ. ಮೈಸೂರು ಸಿಲ್ಕ್’ಗೆ ದೇಶವಿದೇಶಗಳಲ್ಲಿ ಬೇಡಿಕೆ ಇದೆ. ಕೆಎಸ್’ಐಸಿಯಲ್ಲಿ ಹೊಸತನ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಪ್ರತಿವರ್ಷ ಆದಾಯದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ 50 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ನಿಗಮದಲ್ಲಿ ಮತ್ತಷ್ಟು ಸುಧಾರಿತ ಕ್ರಮಗಳು ಕೈಗೊಳ್ಳುವುದು ಹಾಗೂ ಬೇಡಿಕೆ ಆಧರಿತ ಡಿಸೈನ್’ಗಳ ಸೀರೆ ಉತ್ಪಾದನೆಯ ಗುರಿ ಹೊಂದಲಾಗಿದೆ. ಈ ಮೂಲಕ ಕೆಎಸ್’ಐಸಿಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ಉದ್ದೇಶಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.
ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಇ-ತೂಕ, ಇ ಪೇಮೆಂಟ್ ಜಾರಿ ಮಾಡಲಾಗಿದೆ. ಕಚ್ಛಾ ರೇಷ್ಮೆ ಹಾಗೂ ರೇಷ್ಮೆ ನೂಲಿನ ಬೆಲೆಯಲ್ಲಿ ಸ್ಥಿರತೆ ಕಾಪಾಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ರೇಷ್ಮೆ ಸೀರೆ ಉತ್ಪಾದನೆಯಲ್ಲೂ ಹೊಸ ವಿನ್ಯಾಸ ಅಳವಡಿಸಿಕೊಳ್ಳಲು ಸೂಚಿಸಲಾಗಿದ್ದು, ಮಾರಾಟ ಹೆಚ್ಚಿಸಲು ಕಪಲ್ ಪ್ಯಾಕೇಜ್ ಸೇರಿದಂತೆ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ನಿರ್ಧರಿಸಲಾಗಿದೆ. ಈ ಮೂಲಕ ರೇಷ್ಮೆ ಇಲಾಖೆ ಹಾಗೂ ಕೆಎಸ್’ಐಸಿ ನಿಗಮವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡಯ್ಯಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.