ಮನೆ ಅಪರಾಧ ಬಾಲಿವುಡ್ ನಟರು, ಕ್ರಿಕೆಟಿಗರ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚನೆ: ಐವರ ಬಂಧನ

ಬಾಲಿವುಡ್ ನಟರು, ಕ್ರಿಕೆಟಿಗರ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚನೆ: ಐವರ ಬಂಧನ

0

ನವದೆಹಲಿ: ವಂಚಕರ ಗುಂಪೊಂದು ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಹೆಸರಿನಲ್ಲಿ ನಕಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚಿಸಿರುವ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, ಐವರನ್ನು ಬಂಧಿಸಿದ್ದಾರೆ.

ವಂಚಕರು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಜಿಎಸ್‌ ಟಿ ಗುರುತಿನ ಸಂಖ್ಯೆಗಳಿಂದ ಪ್ಯಾನ್ ವಿವರಗಳನ್ನು ಪಡೆದುಕೊಂಡು ಅವುಗಳನ್ನು ಬಳಸಿ ಪುಣೆ ಮೂಲದ ಫಿನ್‌ ಟೆಕ್ ಸ್ಟಾರ್ಟ್ಅಪ್ ‘ಒನ್ ಕಾರ್ಡ್’ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಅಲ್ಲದೆ, ಈ ಕ್ರೆಡಿಟ್ ಕಾರ್ಡ್‌ ಗಳನ್ನು ಬಳಸಿ ₹50 ಲಕ್ಷವನ್ನೂ ವಂಚಿಸಲಾಗಿದೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಶಹಾದ್ರಾ ಡಿಸಿಪಿ ರೋಹಿತ್ ಮೀನಾ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಅವರ ಹೆಸರು ಮತ್ತು ವಿವರಗಳನ್ನು ವಂಚಕರು ಬಳಸಿದ್ದಾರೆ ಎಂದು ಹೇಳಿದ್ದಾರೆ.

ಬಂಧಿತ ಆರೋಪಿಗಳನ್ನು ಸುನಿಲ್ ಕುಮಾರ್, ಮೊಹಮದ್ ಆಸಿಫ್, ಪುನೀತ್, ಪಂಕಜ್, ವಿಶ್ವ ಭಾಸ್ಕರ್ ಶರ್ಮಾ ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ವಂಚನೆಗೆ ಸಂಬಂಧಿಸಿದ ಕಾರ್ಯಾಚರಣೆಯ ವಿಧಾನವನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಈ ಸೆಲೆಬ್ರಿಟಿಗಳ ಜಿಎಸ್‌ ಟಿ ವಿವರಗಳನ್ನು ಆರೋಪಿಗಳು ಗೂಗಲ್‌ ನಲ್ಲಿ ಪಡೆಯುತ್ತಿದ್ದರು. ಜಿಎಸ್‌ಟಿಯ ಮೊದಲೆರಡು ಸಂಖ್ಯೆಗಳು ಸ್ಟೇಟ್ ಕೋಡ್ ಮತ್ತು ನಂತರದ ಸಂಖ್ಯೆಗಳು ಪ್ಯಾನ್ ಸಂಖ್ಯೆಗಳು ಎಂಬುದು ಆರೋಪಿಗಳಿಗೆ ತಿಳಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ವಾಮಮಾರ್ಗದ ಮೂಲಕ ಪ್ಯಾನ್‌ ಕಾರ್ಡ್‌ ಗಳನ್ನು ತಯಾರಿಸಿ ಅವುಗಳ ಮೇಲೆ ತಮ್ಮ ಚಿತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಡಿಯೊ ಪರಿಶೀಲನೆಯ ಸಮಯದಲ್ಲಿ ಚಿತ್ರ ಹೊಂದಿಕೆಯಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಉದಾಹರಣೆಗೆ, ಅಭಿಷೇಕ್ ಬಚ್ಚನ್ ಅವರ ಪ್ಯಾನ್ ಕಾರ್ಡ್‌ ನಲ್ಲಿ ಅವರ ಪ್ಯಾನ್ ಮತ್ತು ಜನ್ಮ ದಿನಾಂಕವಿದೆ. ಆದರೆ, ಚಿತ್ರ ಮಾತ್ರ ಆರೋಪಿಗಳಲ್ಲಿ ಒಬ್ಬನದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.