ಮನೆ ಕಾನೂನು 53 ವರ್ಷದ ಹಳೆಯ ಪ್ರಕರಣ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ: ನ್ಯಾಯಾಧೀಶ ಎಂ.ಎಲ್.ರಘುನಾಥ್

53 ವರ್ಷದ ಹಳೆಯ ಪ್ರಕರಣ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ: ನ್ಯಾಯಾಧೀಶ ಎಂ.ಎಲ್.ರಘುನಾಥ್

0

ಮೈಸೂರು: ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದ 53 ವರ್ಷದ ಹಳೆಯ ಪ್ರಕರಣವೊಂದು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಅವರು ತಿಳಿಸಿದರು.

ಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯ ಕಟ್ಟಡದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1969 ರಲ್ಲಿ ದಾಖಲಾಗಿದ್ದ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವು ಈ ಬಾರಿ ಇತ್ಯರ್ಥಗೊಂಡಿದೆ. ಈ ಪ್ರಕರಣದಲ್ಲಿ 40 ಮಂದಿ ಕಕ್ಷಿದಾರರು, 10 ಮಂದಿ ವಕೀಲರು ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಪ್ರಮುಖವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಕಕ್ಷಿದಾರರೊಬ್ಬರು ಆಕ್ಸಿಜನ್ ಪಡೆಯುತ್ತಿದ್ದರೂ ವಿಡಿಯೋ ಕಾನ್ಫರೆನ್ಸ್ ಮ‌ೂಲಕ ಭಾಗವಹಿಸಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಯು.ಯು.ಲಲಿತ್ ಅವರ ಮುಂದೆ ಮಾತನಾಡಿದರು. ಹೀಗಾಗಿ ಪ್ರಕರಣ ವಿಶೇಷವಾಗಿತ್ತು ಎಂದು ವಿವರಿಸಿದರು‌.

ಈ ಬಾರಿಯ ಲೋಕ್ ಅದಾಲತ್‌ನಲ್ಲಿ 54 ಸಾವಿರಕ್ಕೂ ಹೆಚ್ಚು ವಿವಿಧ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಲ್ಲಿ 32 ವಿವಾಹ ವಿಚ್ಛೇದನ ಪ್ರಕರಣಗಳು ರಾಜಿಯಾಗಿದ್ದು, ಸತಿ, ಪತಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವುದಾಗಿ ತಿಳಿಸಿ ರಾಜಿ ಮಾಡಿಕೊಂಡಿದ್ದಾರೆ ಎಂದರು.

ವಿಚ್ಛೇದನಕ್ಕೆ ಸಂಬಂಧಿಸಿದ 14 ವರ್ಷದ ಪ್ರಕರಣಯೊಂದು ಇತ್ಯರ್ಥಗೊಂಡಿದೆ. ಮತ್ತೊಂದು ಜೋಡಿಗೆ ವಿಚ್ಛೇದನ ಸಿಕ್ಕಿ ಜೀವನಾಂಶ ಕೊಡದಿದ್ದಕ್ಕೆ 6 ತಿಂಗಳು ಸೆರೆವಾಸದಲ್ಲಿದ್ದವರು ರಾಜಿ ಮಾಡಿಕೊಂಡು ಸಹಬಾಳ್ವೆಯ ಜೀವನ ನಡೆಸಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಲೋಕ್ ಅದಾಲತ್‌ ಪ್ರಾಮುಖ್ಯತೆಯನ್ನು 53 ವರ್ಷದ ಇತ್ಯರ್ಥಗೊಂಡ ಪ್ರಕರಣ ಬಿಂಬಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬೇಕು. ಈ ರೀತಿಯ ಪರಸ್ಪರ ರಾಜಿಯಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ ಎಂದು ತಿಳಿಸಿದರು.

ವಿವಾಹ ವಿಚ್ಛೇದನ ಪ್ರಕರಣಗಳಿಗೆ ಸಂಬಂದಿಸಿದ ಜೋಡಿಗಳು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ ರಾಜಿ ಮಾಡಿಕೊಳ್ಳಬಹುದು. ಇದರಿಂದ ಜೀವನದಲ್ಲಿ ನೆಮ್ಮದಿ ದೊರಕುವುದರ ಜೊತೆಗೆ, ಕುಟುಂಬದಲ್ಲಿ ಶಾಂತಿ ಹಾಗೂ ಮಕ್ಕಳ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ ಭೂತೆ, ನಗರ ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.