ಮನೆ ಕಾನೂನು ಜಯಲಲಿತಾ ಸಾವು: ಮಾಜಿ ಸಚಿವ ವಿಜಯಭಾಸ್ಕರ್ ವಿರುದ್ಧದ ಅರ್ಮುಗಸ್ವಾಮಿ ಆಯೋಗದ ಶಿಫಾರಸ್ಸಿಗೆ ಮದ್ರಾಸ್ ಹೈಕೋರ್ಟ್ ತಡೆ

ಜಯಲಲಿತಾ ಸಾವು: ಮಾಜಿ ಸಚಿವ ವಿಜಯಭಾಸ್ಕರ್ ವಿರುದ್ಧದ ಅರ್ಮುಗಸ್ವಾಮಿ ಆಯೋಗದ ಶಿಫಾರಸ್ಸಿಗೆ ಮದ್ರಾಸ್ ಹೈಕೋರ್ಟ್ ತಡೆ

0

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದ ಅರ್ಮುಗಸ್ವಾಮಿ ಸಮಿತಿಯ ತನಿಖಾ ವರದಿಯಲ್ಲಿ ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರ ವಿರುದ್ಧ ದೋಷಾರೋಪ ಹೊರಿಸಿ ತನಿಖೆಗೆ ಶಿಫಾರಸ್ಸು ಮಾಡಿದ್ದ ಭಾಗಕ್ಕೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

[ಡಾ. ಸಿ ವಿಜಯಭಾಸ್ಕರ್ ವರ್ಸಸ್ ರಾಜ್ಯ ಸರ್ಕಾರ].

ಅರ್ಮುಗಸ್ವಾಮಿ ಸಮಿತಿಯ ವರದಿಯ ನಿರ್ದಿಷ್ಟ ಭಾಗ ಮತ್ತು ಇದರ ಬೆನ್ನಿಗೆ 2022ರ ಅಕ್ಟೋಬರ್ 17ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ವಜಾ ಮಾಡಬೇಕು ಎಂದು ಕೋರಿ ವಿಜಯಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಿ ಆರ್ ವಿಶ್ವನಾಥನ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ವರದಿಯಲ್ಲಿನ ವಿಚಾರ ಮತ್ತು ಶಿಫಾರಸ್ಸುಗಳಿಗೆ ಯಾವುದೇ ಕಾನೂನಿನ ಆಧಾರವಿಲ್ಲ. ಹೀಗಾಗಿ, ಅವುಗಳನ್ನು ವಾಸ್ತವಿಕವಾಗಿ ಪತ್ತೆಯಾಗಿರುವ ವಿಚಾರಗಳು ಎನ್ನಲಾಗದು. ಸರ್ಕಾರ ಹೊರಡಿಸಿರುವ ಆದೇಶವು ಕಾನೂನುಬಾಹಿರವಾಗಿದ್ದು, ಸ್ವಾಭಾವಿಕ ನ್ಯಾಯತತ್ವ ಮತ್ತು ತನಿಖಾ ಆಯೋಗ ಕಾಯಿದೆಯ ಶಾಸನಬದ್ಧ ಸ್ಕೀಮ್ಗೆ ವಿರುದ್ಧವಾಗಿದೆ ಎಂದು ವಿಜಯಭಾಸ್ಕರ್ ಅವರ ಪರ ವಕೀಲರು ವಾದಿಸಿದರು.

ಅರ್ಮುಗಂ ವರದಿಯ ಬೆನ್ನಿಗೇ ರಾಜ್ಯ ಸರ್ಕಾರವು 2022ರ ಅಕ್ಟೋಬರ್ 17ರಂದು ವಿಜಯಭಾಸ್ಕರ್ ಸೇರಿದಂತೆ ಎಂಟು ಮಂದಿಯ ವಿರುದ್ಧ ತನಿಖೆ ನಡೆಸಲು ಆದೇಶಿಸಿತ್ತು.

ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಐಎಡಿಎಂಕೆ ನೇತೃತ್ವದ ಸರ್ಕಾರವು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಅರ್ಮುಗಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು. 2022ರ ಆಗಸ್ಟ್ 23ರಂದು ಆಯೋಗವು ಡಿಎಂಕೆ ನೇತೃತ್ವದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಅಂತಿಮ ವರದಿ ಸಲ್ಲಿಸಿತ್ತು.

ಜಯಲಲಿತಾ ಗೆಳತಿ ವಿ ಕೆ ಶಶಿಕಲಾ, ವಿಜಯಭಾಸ್ಕರ್ ಸೇರಿದಂತೆ ಹಲವರ ವಿರುದ್ಧ ತನಿಖೆ ನಡೆಸುವಂತೆ ಆಯೋಗವು ಅಂತಿಮ ವರದಿಯಲ್ಲಿ ಶಿಫಾರಸ್ಸು ಮಾಡಿದೆ.