ಮನೆ ರಾಜಕೀಯ ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಹೋಗುವುದು ಸೂಟ್ ಕೆಸ್ ತೆಗೆದುಕೊಂಡು ಹೋಗುವುದಕ್ಕಾ?: ಬಿಜೆಪಿಗೆ ನೇರ ಪ್ರಶ್ನೆ...

ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಹೋಗುವುದು ಸೂಟ್ ಕೆಸ್ ತೆಗೆದುಕೊಂಡು ಹೋಗುವುದಕ್ಕಾ?: ಬಿಜೆಪಿಗೆ ನೇರ ಪ್ರಶ್ನೆ ಹಾಕಿದ ಹೆಚ್ ಡಿಕೆ

ನೂರು ರೂಪಾಯಿ ಕೆಲಸಕ್ಕೆ ಕೇವಲ 20 ರುಪಾಯಿ ಕೆಲಸ ಮಾತ್ರ ಆಗುತ್ತಿದೆ!!

0

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಹಣದ ಕಂತೆಯೊಂದಿಗೆ ಲೋಕಾಯುಕ್ತ ಬಲೆಗೆ ಬಿದ್ದ ನಂತರ ಬಿಜೆಪಿ ಮತ್ತು ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಬಿಜೆಪಿ ನಾಯಕರು ಪದೇಪದೆ ರಾಜ್ಯಕ್ಕೆ ಬಂದು ಹೋಗುವುದು ಸೂಟ್ ಕೆಸ್ ತೆಗೆದುಕೊಂಡು ಹೋಗುವುದಕ್ಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯಕ್ಕೆ ಕಳೆದ ಕೆಲವೇ ದಿನಗಳಿಂದ ಅಮಿತ್ ಶಾ ಅವರು ಆರನೇ ಬಾರಿ ಅಥವಾ  ಏಳನೇ ಬಾರಿ ಬಂದಿದ್ದಾರೆ. ಅವರ ಎಟಿಎಂ ಹೇಳಿಕೆ ಕುರಿತ ಮಾಹಿತಿ ಈಗ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೆಡಿಎಸ್ ಪಕ್ಷದ ಎಟಿಎಂ ಎಂದು ಹೇಳಿದ್ದರಲ್ಲ, ಅದು ಯಾವ ಎಟಿಎಂ ಎನ್ನುವುದು ಈಗ ಗೊತ್ತಾಗುತ್ತಿದೆ ಎಂದು ಹೇಳಿದರು.

ಇಂದು ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ಮುಕ್ತ ಬಿಜೆಪಿಯ ಆಡಳಿತ ಇದೇನಾ? ಕೇಂದ್ರ ಸರಕಾರಕ್ಕೆ ಮಾನ ಮರ್ಯಾದೆ ಇದೆಯಾ? ಬಿಜೆಪಿಯವರು ನಿರಂತರವಾಗಿ ಕರ್ನಾಟಕ್ಕೆ ಬರ್ತಿರೋದು ಸೂಟ್ ಕೇಸ್ ತಗೊಂಡು ಹೋಗೊಕಾ!? ದುಡ್ಡು ಲೂಟಿ ಮಾಡಿ ಜನಕ್ಕೆ ದುಡ್ಡು ಕೊಡ್ತೀವಿ ಅಂತ ಹೇಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರಂತ ಎಂದರೆ, ಸಂವಿಧಾನದ ಚೌಕಟ್ಟಿನಲ್ಲಿ ಇಂಥ ಪ್ರಕರಣಗಳಿಗೆ ಶಿಕ್ಷೆ ಆಗಲ್ಲ. ಅಂತಿಮವಾಗಿ ಜನತೆ ತೀರ್ಮಾನ ಮಾಡಬೇಕು. ಕರ್ನಾಟಕದ ಹೆಸರನ್ನು ಕಮಿಷನ್ ರಾಜ್ಯ ಅಂತ ಹೆಸರಿಡಬೇಕಾದ ಪರಿಸ್ಥಿತಿ ಬಂದಿದೆ. ಜನತಾ ನ್ಯಾಯಲಯದಲ್ಲಿಯೇ ಇದರ ಬಗ್ಗೆ ತೀರ್ಮಾನವಾಗಬೇಕು ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಯಾವ ಕುಟುಂಬ, ಯಾವ ಪಕ್ಷ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ ಎನ್ನುವುದು ನಿನ್ನೆ ನಡೆದ ಲೋಕಾಯುಕ್ತ ದಾಳಿಯಿಂದ ಗೊತ್ತಾಗಿದೆ. ಹಾಗೆ ನೋಡಿದರೆ ಈ ಪ್ರಕರಣ ಏನೇನೂ ಅಲ್ಲ. ಮುಂಬರುವ ವಿಧಾನಸಭೆ ಚುನಾವಣೆಗೆ ದೊಡ್ಡ ಮಟ್ಟದ ಹಣ ಹರಿಯುತ್ತಿದೆ. 40 ಪರ್ಸೆಂಟ್ ನ  ಕೊಳಕು ಈಗ ಹೊರ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಕಿಡಿಕಾರಿದರು.

ಈ ಹಣ ತಮ್ಮ ಮಗನಿಗೆ ಸಂಬಂಧಪಟ್ಟಿದ್ದು ಎಂದು ಶಾಸಕರು ಹೇಳಿದ್ದಾರೆ. ಹಾಗಾದರೆ, ಅವರು ಸಾಬೂನು ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟರು? ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಯಾಕೆ ಪಡೆದರು? ನಂದೇನು ತಪ್ಪಿಲ್ಲ ಅಂದಾಗ ಅವರು ರಾಜೀನಾಮೆ ಯಾಕೆ ಕೊಟ್ಟರು? ಇದಕ್ಕೆ ಸಂಬಂಧಪಟ್ಟವರು ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ನೂರು ರೂಪಾಯಿ ಕೆಲಸಕ್ಕೆ ಕೇವಲ 20 ರುಪಾಯಿ ಖರ್ಚು:

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ಯದ್ದು ಇನ್ನೊಂದು ಕರ್ಮಕಾಂಡ. ನೂರು ರೂಪಾಯಿ ಕೆಲಸಕ್ಕೆ 20 ರುಪಾಯಿ ಕೆಲಸ ಆಗುತ್ತಿದೆ ಅಷ್ಟೇ. ಅಮಿತ್ ಶಾ ಅವರಿಗೆ ನೈತಿಕತೆ ಇದ್ದರೆ ಈ ಬಗ್ಗೆ ಏನಾದರೂ ಹೇಳಬೇಕು. ಇದೇನಾ ಭ್ರಷ್ಟಾಚಾರ ಮುಕ್ತ ಮಾಡೋದು? ಬರೀ ವೇದಿಕೆ ಮೇಲೆ ಮಾತಾಡೋದಲ್ಲ. ನಿನ್ನೆ ದಿನ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸತ್ಯ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಎನ್ನುವುದು ಕೇವಲ ಬಾಯಿ‌ ಮಾತಲ್ಲಿ ಆಗಲ್ಲ ಎಂದು ಹೇಳಿದ್ದಾರೆ. ಇಷ್ಟೆಲ್ಲಾ ಇದ್ದರೂ ಅಮಿತ್ ಶಾ ಅವರು ಸೂಟ್ ಕೇಸ್ ತಗೊಂಡು ಹೋಗೋಕೆ ರಾಜ್ಯಕ್ಕೆ ಬಂದಿದ್ದೀರಾ? ಎಂದು ತೀಕ್ಷಣವಾಗಿ ಪ್ರಶ್ನಿಸಿದರು.

ಇವತ್ತು ಹಲವಾರು ಬಿಜೆಪಿ ಶಾಸಕರು ನಡೆಸುವ ಅವ್ಯವಹಾರ ಮಿತಿ ಮೀರಿ ಹೋಗಿದೆ. ಈ ಭ್ರಷ್ಟಾಚಾರವು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ಮೀರಿದೆ. ಮುಂದಿನ ಚುನಾವಣೆಯಲ್ಲಿ ಐದು ಹತ್ತು ಸಾವಿರ ಕೊಡ್ತೀವಿ ಎಂದು ಕೆಲವರು ಹೇಳುತ್ತಿದ್ದಾರಲ್ಲ, ಅದೆಲ್ಲಾ ಇಂಥದ್ದೇ ಪಾಪದ ದುಡ್ಡು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲ್ಲ, ಕೇವಲ ಒಂದೆರಡು ದಿನ ಪ್ರಚಾರಕ್ಕೆ ಮಾತ್ರ ಇವು ಸೀಮಿತವಾಗುತ್ತವೆ. ಇವರು ಅಂತಿಮವಾಗಿ ಕರ್ನಾಟಕವನ್ನು ‘ ಕಮಿಷನ್ ರಾಜ್ಯ’ ವನ್ನಾಗಿ ಮಾಡಲು ಹೊರಟಿದ್ದಾರೆ. ಇಂಥವರಿಂದ ರಾಜ್ಯದ ಉದ್ಧಾರ ಸಾಧ್ಯವಾ? ಅಭಿವೃದ್ಧಿಪರ ಕರ್ನಾಟಕವನ್ನು ಇಂದು ಕಮೀಷನ್ ರಾಜ್ಯವನ್ನಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯ ಇಲ್ಲ. ಕನ್ನಡಿಗರ ಪಕ್ಷ ಜೆಡಿಎಸ್ ಪಕ್ಷದಿಂದ ಮಾತ್ರ ಇಂಥ ಅನಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಇದಕ್ಕೆ ಕಠಿಣ ಕ್ರಮ ಕೈಗೊಳ್ಳುವ ಎದೆಗಾರಿಕೆ ಬೇಕು. ನಮ್ಮ ಪಕ್ಷಕ್ಕೆ ಅಂತಹ ಧೈರ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

ಲೋಕ ಕಲ್ಯಾಣಕ್ಕಾಗಿ ಪೂಜೆ:

ಬಿಡದಿ ತೋಟದ ಮನೆಯಲ್ಲಿ ಇಂದು ನಡೆದ ಪೂಜೆ ಲೋಕ ಕಲ್ಯಾಣಕ್ಕಾಗಿ ಹಾಗೂ ನಮ್ಮ ತಂದೆ ತಾಯಿ ಅವರ ಆರೋಗ್ಯ ವೃದ್ಧಿಗಾಗಿ ನಡೆಸಲಾಗಿದೆ. ಅಲ್ಲದೆ, ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವ ಶಕ್ತಿಯನ್ನು ಕೊಡು ಎಂದು ದೇವರನ್ನು ಬೇಡಿಕೊಂಡಿದ್ದೇನೆ. ಇದು ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.