ಮನೆ ಸುದ್ದಿ ಜಾಲ 53 ಸಾವಿರ ಫಲಾನುಭವಿಗಳಿಗೆ ಸವಲತ್ತು ವಿತರಣೆ: ಎಸ್.ಟಿ.ಸೋಮಶೇಖರ್

53 ಸಾವಿರ ಫಲಾನುಭವಿಗಳಿಗೆ ಸವಲತ್ತು ವಿತರಣೆ: ಎಸ್.ಟಿ.ಸೋಮಶೇಖರ್

ಮಾ. 7 ರಂದು ಫಲಾನುಭವಿಗಳ ಉತ್ಸವ ಸಮ್ಮೇಳನಕ್ಕೆ ಸಿಎಂಅವರಿಂದ ಚಾಲನೆ

0

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ಉತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾ. 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಫಲಾನುಭವಿಗಳ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ಮುಖ್ಯ ಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವರು. ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಜನ ಪ್ರತಿನಿಧಿಗಳು ಸಹಕರಿಸಬೇಕು. ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 27 ಸಾವಿರ ಫಲಾನುಭವಿಗಳು, ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ 10 ಸಾವಿರ ಫಲಾನುಭವಿಗಳು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 5 ಸಾವಿರ ಫಲಾನುಭವಿಗಳು, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 4 ಸಾವಿರ ಫಲಾನುಭವಿಗಳು, ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದಿರುವ 3 ಸಾವಿರ ರೈತ ಫಲಾನುಭವಿಗಳನ್ನು ಸಹಕಾರ ಇಲಾಖೆಯ ವತಿಯಿಂದ ಕರೆತರಲಾಗುವುದು. ಒಟ್ಟಾರೆಯಾಗಿ 53 ಸಾವಿರ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು. ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ ಅವರು ಮಾತನಾಡಿ ಸ್ಲಂ ಬೋರ್ಡ್ ವತಿಯಿಂದ 277 ಮನೆಗಳನ್ನು ಫಲಾನುಭವಿಗಳಿಗೆ ನಿರ್ಮಿಸಿದ್ದು, ಫಲಾನುಭವಿಗಳ ಸಮ್ಮೇಳನದಲ್ಲಿ ಮುಖ್ಯ ಮಂತ್ರಿಗಳಿoದ ಹಕ್ಕು ಪತ್ರಗಳನ್ನು ವಿತರಣೆ ಮಾಡಿಸಲಾಗುವುದು. ಕೋವಿಡ್‌ನಿಂದ ಮರಣ ಹೊಂದಿದ ಕುಟುಂಬದವರಿಗೆ ನೀಡಬೇಕಿದ್ದ 1 ಲಕ್ಷ ಪರಿಹಾರಧನ ಕೆಲವರಿಗೆ ತಲುಪಿಲ್ಲ ಈ ಕುರಿತು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಶಕರಾದ ಸಾ ರಾ ಮಹೇಶ್ ಅವರು ಮಾತನಾಡಿ ಅತಿವೃಷ್ಠಿ ಸಂಧರ್ಭದಲ್ಲಿ ಕೆ ಆರ್ ನಗರ ತಾಲೂಕಿನ ಚೌಕಹಳ್ಳಿ ಗ್ರಾಮದ ನಾಗಮ್ಮ ತಿ/o ಗೌರೀಶ್ ಎಂಬುವರು ಮನೆ ಬಿದ್ದು ಹೋಗಿತ್ತು. ಇವರಿಗೆ 50 ಸಾವಿರ ಪರಿಹಾರ ನೀಡಿದ್ದು, ಬಾಕಿ 50 ಸಾವಿರ ಪರಿಹಾರ ಇದುವರೆಗೂ ದೊರೆತಿಲ್ಲ ಈ ಬಗ್ಗೆ ಪರಿಶೀಲಸಿ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ ಕೆ ವಿ ರಾಜೇಂದ್ರರವರು ಮಾತನಾಡಿ ಫಲಾನುಭವಿಗಳ ಉತ್ಸಹ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳನ್ನು ಕರೆತಂದು ಆಯೋಜಿಸಲಾಗುವುದು. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಫಲಾನುಭವಿಗಳಿಗೆ ನೀಡಲಾಗುವುದು. ಸೌಲಭ್ಯಗಳನ್ನು ಪಡೆದಿರುವ ಕೆಲವು ಫಲಾನುಭವಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

ಪ್ರತಿ ಇಲಾಖೆಯವರು ಫಲಾನುಭವಿಗಳನ್ನು ಕರೆತರಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮ ಪಂಚಾಯಿತಿಯ ಫಲಾನುಭವಿಗಳನ್ನು ಕರೆತರಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಶಿಷ್ಟಾಚಾರ ಅನ್ವಯ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಿ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಮಹಾನಗರ ಪಾಲಿಕೆಯ ಮಹಾಪೌರರದ ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.