ಚನ್ನಗಿರಿ (ದಾವಣಗೆರೆ): ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ 16.47 ಲಕ್ಷ ನಗದು, ಚಿನ್ನಾಭರಣ ಹಾಗೂ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಲುಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಈ ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಇತರ ಐವರು ಅಧಿಕಾರಿಗಳ ನೇತೃತ್ವದಲ್ಲಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶಾಸಕರ ಒಡೆತನದ ತಾಲ್ಲೂಕಿನ ಚನ್ನೇಶಪುರ (ಮಾಡಾಳ್) ಗ್ರಾಮದ ನಿವಾಸ, ಮಾವಿನಹೊಳೆಯಲ್ಲಿರುವ ಜಲ್ಲಿ ಕ್ರಷರ್ ಕಚೇರಿ ಹಾಗೂ ಮಾವಿನಕಟ್ಟೆಯ ತೋಟದ ಮನೆಗಳಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಶೋಧ ನಡೆಸಿದ್ದು, 4 ಬ್ಯಾಗ್‌ಗಳಲ್ಲಿ ಮಹತ್ವದ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಕೊಂಡೊಯ್ದಿದ್ದಾರೆ.
ಶೋಧ ಸಮಯದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರ ಪತ್ನಿ ಲೀಲಾವತಿ ಹಾಗೂ ಪುತ್ರ ಪ್ರವೀಣಕುಮಾರ್ ಇದ್ದರು.
ಲೋಕಾಯುಕ್ತ ಸಿಬ್ಬಂದಿ ವಶಪಡಿಸಿಕೊಂಡ ಚಿನ್ನಾಭರಣಗಳ ಮೌಲ್ಯಮಾಪನ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.
2018ರ ವಿಧಾನಸಭೆ ಚುನಾವಣೆ ಸಂದರ್ಭ ಶಾಸಕ ಮಾಡಾಳ್ ವಿರೂಪಾಕ್ಪಪ್ಪ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆದಿತ್ತು.