ಮನೆ ಸುದ್ದಿ ಜಾಲ ವೈರಮುಡಿ ಉತ್ಸವ: ಆಭರಣ ಪೆಟ್ಟಿಗೆ ಕೊಂಡೊಯ್ಯುವ ವಿಚಾರಕ್ಕೆ ಎರಡು ಸ್ಥಾನಿಕ ಕುಟುಂಬಗಳ ನಡುವೆ ಜಟಾಪಟಿ

ವೈರಮುಡಿ ಉತ್ಸವ: ಆಭರಣ ಪೆಟ್ಟಿಗೆ ಕೊಂಡೊಯ್ಯುವ ವಿಚಾರಕ್ಕೆ ಎರಡು ಸ್ಥಾನಿಕ ಕುಟುಂಬಗಳ ನಡುವೆ ಜಟಾಪಟಿ

0

ಮಂಡ್ಯ: ಜಿಲ್ಲಾ ಖಜಾನೆಯಿಂದ ವೈರಮುಡಿ ಆಭರಣಗಳ ಪೆಟ್ಟಿಗೆ ಕೊಂಡೊಯ್ಯುವ ವಿಚಾರದಲ್ಲಿ ಎರಡು ಸ್ಥಾನೀಕ ಕುಟಂಬಗಳ ನಡುವೆ ಸೋಮವಾರ ಬೆಳಿಗ್ಗೆ ಮೇಲುಕೋಟೆಯಲ್ಲಿ ಜಟಾಪಟಿ ನಡೆಯಿತು.

ಚೆಲುವನಾರಾಯಣ ದೇವಾಲಯದಲ್ಲಿ 4 ಸ್ಥಾನೀಕ ಕುಟುಂಬಗಳಿವೆ. ವೈರಮುಡಿ ಕೊಂಡೊಯ್ಯುವ ವಿಚಾರದಲ್ಲಿದ್ದ  1 ಮತ್ತು 4ನೇ ಸ್ಥಾನೀಕ ಕುಟುಂಬ ಸದಸ್ಯರ ವಿವಾದ ಈ ವರ್ಷವೂ ಮರುಕಳಿಸಿದೆ.

ಆಭರಣ ಪೆಟ್ಟಿಗೆ ತರಲು ಮೇಲುಕೋಟೆಯಿಂದ ಮಂಡ್ಯದತ್ತ ಹೊರಟಿದ್ದ ವೈರಮುಡಿ ಕೊಂಡೊಯ್ಯುವ ವಾಹನವನ್ನು 4ನೇ ಸ್ಥಾನೀಕರಾದ ಶ್ರೀನಿವಾಸ ನರಸಿಂಹನ್‌ ಗುರೂಜಿ ಕುಟುಂಬ ಸದಸ್ಯರು ತಡೆದು ಪ್ರತಿಭಟನೆ ನಡೆಸಿದರು.

ದೇವಾಲಯದ ಕೈಪಿಡಿ ನಿಯಮದಂತೆ ಎಲ್ಲಾ ಸ್ಥಾನೀಕರು ಜಿಲ್ಲಾ ಖಜಾನೆಯಿಂದ ವೈರಮುಡಿ ಪೆಟ್ಟಿಗೆ ತರಬೇಕು. ಆದರೆ 1ನೇ ಸ್ಥಾನೀಕ ಕುಟುಂಬ ಸದಸ್ಯರು ಅಧಿಕಾರಿಗಳ ಜೊತೆ ಶಾಮೀಲಾಗಿ ಕೈಪಿಡಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಈ ಕುರಿತು ಕೈಪಿಡಿ ನಿಯಮದಂತೆ ಸಂಪ್ರದಾಯ ಪಾಲಿಸಲು 2014ರಲ್ಲಿ ಹೈಕೋರ್ಟ್‌ ಆದೇಶ ನೀಡಿದೆ. ಆದರೂ ನಮ್ಮ ಕುಟುಂಬವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ 1ನೇ ಸ್ಥಾನೀಕರಾದ ಕರಗಂ ನಾರಾಯಣ ಐಯ್ಯಂಗಾರ್‌ ಕುಟುಂಬ ಸದಸ್ಯರು, ಕೋರ್ಟ್‌ ನಮ್ಮ ಪರವಾಗಿಯೂ ಆದೇಶ ನೀಡಿದೆ ಎಂದು ತಿಳಿಸಿದರು.

ಎರಡೂ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು 4ನೇ ಸ್ಥಾನೀಕ ಕುಟುಂಬ ಸದಸ್ಯರನ್ನು ಪಕ್ಕಕ್ಕೆ ತಳ್ಳಿ ವಾಹನ ತೆರಳಲು ಅವಕಾಶ ಮಾಡಿಕೊಟ್ಟರು.

ಬೆಳಿಗ್ಗೆಯಿಂದಲೂ ಅಧಿಕಾರಿಗಳ ತಂಡ ಜಿಲ್ಲಾ ಖಜಾನೆಯಿಂದ ವಾಹನಕ್ಕಾಗಿ ಕಾದು ಕುಳಿತಿದ್ದರು. ವಾಹನ ಬಂದ ನಂತರ ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ ಆಭರಣ ಪೆಟ್ಟಿಗೆಗೆ ಪೂಜೆ ಸಲ್ಲಿಸಿದರು. ನಂತರ ನಗರದ ಲಕ್ಷ್ಮಿ ಜನಾರ್ಧನ ದೇವಾಲಯಲ್ಲಿ ಪೂಜೆ ಸಲ್ಲಿಸಿ ಮೇಲುಕೋಟೆಗೆ ಬಿಗಿ ಭದ್ರತೆಯ ನಡುವೆ ಕಳುಹಿಸಲಾಯಿತು.