ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಹಾಗೂ ಆರ್’ಜೆಡಿ ಪಕ್ಷದ ನಾಯಕ ಲಾಲೂ ಪ್ರಸಾದ್ ಅವರನ್ನು ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಭೂಮಿಯನ್ನು ಕೊಡುಗೆಯಾಗಿ ನೀಡುವಿಕೆ ಅಥವಾ ಕಡಿಮೆ ದರದಲ್ಲಿ ಭೂ ಮಾರಾಟ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಿದ ಆರೋಪದಲ್ಲಿ ಲಾಲೂ ಪ್ರಸಾದ್ ಕುಟುಂಬ ಮತ್ತು ಇತರ 14 ಮಂದಿಯನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು ಸಮನ್ಸ್ ಕೂಡ ನೀಡಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ ಸುಮಾರು 10:40ಕ್ಕೆ ಪಂಡ್ರಾ ಪಾರ್ಕ್‌ನಲ್ಲಿರುವ ಲಾಲೂ ಅವರ ನಿವಾಸಕ್ಕೆ ಸಿಬಿಐ ತಂಡ ಭೇಟಿ ಕೊಟ್ಟಿದೆ. ಪ್ರಕರಣ ಸಂಬಂಧ ಇಡೀ ದಿನ ವಿಚಾರಣೆ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.
ಲಾಲೂ ಅವರ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಅವರು, ನಮ್ಮ ಕುಟುಂಬವು ಬಿಜೆಪಿಯನ್ನು ತೀವ್ರ ವಿರೋಧಿಸುತ್ತಿರುವ ಕಾರಣ ಸಿಬಿಐ ಕ್ರಮಕ್ಕೆ ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು.














