ಮನೆ ರಾಜಕೀಯ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ: ಕೃಷ್ಣಪಾಲ್‌ ಗುರ್ಜರ್‌

ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ: ಕೃಷ್ಣಪಾಲ್‌ ಗುರ್ಜರ್‌

0

ಮೈಸೂರು: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರದ ವಿದ್ಯುತ್‌ ಮತ್ತು ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೃಷ್ಣಪಾಲ್‌ ಗುರ್ಜರ್‌ ಹೇಳಿದರು.

ಬಿಜೆಪಿಯಿಂದ ಇಲ್ಲಿ ಸೋಮವಾರ ಆಯೋಜಿಸಿದ್ದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಗೆ ಕರ್ನಾಟಕದ ಚುನಾವಣೆ ಸೆಮಿಫೈನಲ್‌. ರಾಜ್ಯದಲ್ಲಿ ಬಿಜೆಪಿ ಬಾರದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರೇ ಶೇ.76ರಷ್ಟು ಜನರ ಆಯ್ಕೆ ಎನ್ನುವುದು ಅನೇಕ ಸರ್ವೆಗಳಿಂದ ಬಹಿರಂಗಗೊಂಡಿವೆ. ಮೋದಿ ದೇಶ ಮೊದಲು ಎನ್ನುತ್ತಾರೆ ಹಾಗಾಗಿಯೇ ಅವರನ್ನು ಜನ ಪ್ರೀತಿಸುತ್ತಾರೆ. ಬೇರೆ ಪಕ್ಷದ ನಾಯಕರಿಗೆ ಕುಟುಂಬವೇ ಮುಖ್ಯ ಎಂದು ಕಾಂಗ್ರೆಸ್‌ ನಾಯಕರ ಬಗ್ಗೆ ವ್ಯಂಗ್ಯವಾಡಿದರು.

ಮೋದಿ ಆಡಳಿತಕ್ಕೂ ಮೊದಲ 70 ವರ್ಷದಲ್ಲಿ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಮೋದಿ ಆಡಳಿತದ ಎಂಟೂವರೆಗೆ ವರ್ಷದಲ್ಲಿ ಅದೇ ಸಂಖ್ಯೆಯಲ್ಲಿ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಮಾಡಲಾಗಿದೆ. ರಸ್ತೆ, ರೈಲ್ವೆ, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೋದಿಯ ಸಾಧನೆ ವಿಸ್ಮಯಕಾರಿಯಾಗಿ ಬೆಳೆದುಬಂದಿದೆ. ಬೇರೆ ಯಾವುದೇ ಪಕ್ಷದಿಂದ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ. ಕಾಶ್ಮೀರದ 370ನೇ ವಿಧಿ ರದ್ದಾಗುತ್ತಿರಲಿಲ್ಲ ಎಂದರು.

ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕಡತಗಳು ವೇಗವಾಗಿ ವಿಲೇವಾರಿಯಾಗುತ್ತಿವೆ. ಮೋದಿ ಕ್ಯಾಬಿನೆಟ್‌ ನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಇಂದು ಭಾರತ ಯುದ್ಧ ಸಾಮಗ್ರಿಯ ಉತ್ಪಾದನೆಯಲ್ಲಿ, ಕೋವಿಡ್‌’ನಂತಹ ಸಂಕಷ್ಟ ಎದುರಿಸುವಲ್ಲಿ ಸ್ವಾವಲಂಬಿಯಾಗಿದೆ ಎಂದು ಹೇಳಿದರು.

ಭಾರತ ಇಂದು ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆಯಾಗುತ್ತಿದೆ. ಆದರೆ ಹಂಚಿಕೆಯ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾ ಸಂಚಾಲಕ ಮಲ್ಲರಾಜ್ ಅರಸ್, ಮುಖಂಡ ಡಾ.ಸಿದ್ದರಾಮಯ್ಯ ಇದ್ದರು.