ಮನೆ ರಾಜಕೀಯ ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಹಣ ನಾವು ಸಂಪಾದಿಸಿದ್ದು: ಮಾಡಾಳ್ ವಿರೂಪಾಕ್ಷಪ್ಪ

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಹಣ ನಾವು ಸಂಪಾದಿಸಿದ್ದು: ಮಾಡಾಳ್ ವಿರೂಪಾಕ್ಷಪ್ಪ

0

ದಾವಣಗೆರೆ: ಲೋಕಾಯುಕ್ತ ದಾಳಿ ನಡೆಸಿದ ವೇಳೆ ಮನೆಯಲ್ಲಿ ಪತ್ತೆಯಾಗಿರುವ ನಗದು ನಾವು ಸಂಪಾದಿಸಿದ ಹಣವಾಗಿದೆ. ಅದಕ್ಕೆ ಅಗತ್ಯವಾದ ದಾಖಲೆ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ಮಂಗಳವಾರ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರಾದ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ನಾನೆಲ್ಲೂ ಓಡಿ ಹೋಗಿಲ್ಲ, ಊರಿನಲ್ಲೇ ಇದ್ದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿರುವ ಸುದ್ದಿ ತಿಳಿದ ನಂತರ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಹುಟ್ಟೂರು ಚನ್ನೇಶಪುರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಡಾಳ್ ಬೆಂಬಲಿಗರು ಹೂ ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮೂಲಕ ಕರೆದುಕೊಂಡು ಬಂದಿದ್ದಾರೆ.

 “ನಾನು ಕೆಎಸ್ ಡಿಎಲ್ ಅಧ್ಯಕ್ಷನಾಗಿ ಯಾವುದೇ ಅಕ್ರಮ ವಹಿವಾಟು ನಡೆಸಿಲ್ಲ. ನಮ್ಮ ಅಡಕೆ ತೋಟ, ಕ್ರಷರ್ ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೇವು. ಲೋಕಾಯುಕ್ತ ದಾಳಿ ವೇಳೆ ಈ ಹಣವನ್ನು ಪತ್ತೆಹಚ್ಚಿದ್ದಾರೆ. ಆ ಹಣಕ್ಕೆ ನನ್ನ ಬಳಿ ದಾಖಲೆ ಇದ್ದು, ಅದನ್ನು ನೀಡುತ್ತೇನೆ” ಮಾಡಾಳ್ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಹೈಕೋರ್ಟ್ ಆದೇಶದಂತೆ 48ಗಂಟೆಯೊಳಗೆ ತನಿಖಾಧಿಕಾರಿ ಎದುರು ಹಾಜರಾಗುತ್ತೇನೆ ಎಂದು ಹೇಳಿದರು.

ಮೆರವಣಿಗೆ ನಿಲ್ಲಿಸಲು ಕಟೀಲ್ ಸೂಚನೆ

ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಬೆಂಬಲಿಗರು ಹೂ ಹಾರ ಹಾಕಿ ಸ್ವಾಗತಿಸಿ, ಮೆರವಣಿಗೆ ಮೂಲಕ ಕರೆತಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ದೂರು ಕರೆ ಮಾಡಿ, ಮೆರವಣಿಗೆ ಕೂಡಲೇ ನಿಲ್ಲಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.