ಮನೆ ರಾಜ್ಯ ಹವಾಮಾನ ಪರಿಸ್ಥಿತಿ ಅಧ್ಯಯನಕ್ಕಾಗಿ ಗೋವಾದಿಂದ ಹಾರಿಸಿದ್ದ ಬಲೂನ್ ಬೈಲಹೊಂಗಲದಲ್ಲಿ ಪತ್ತೆ

ಹವಾಮಾನ ಪರಿಸ್ಥಿತಿ ಅಧ್ಯಯನಕ್ಕಾಗಿ ಗೋವಾದಿಂದ ಹಾರಿಸಿದ್ದ ಬಲೂನ್ ಬೈಲಹೊಂಗಲದಲ್ಲಿ ಪತ್ತೆ

0

ಬೈಲಹೊಂಗಲ: ಹವಾಮಾನ ಪರಿಸ್ಥಿತಿ ಅಧ್ಯಯನಕ್ಕಾಗಿ ಗೋವಾದಿಂದ ಹಾರಿಸಿದ್ದ ಬಲೂನ್‌ ಒಂದು ತಾಲ್ಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಜಮೀನಿನಲ್ಲಿ ಗುರುವಾರ ಪತ್ತೆಯಾಗಿದ್ದು, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ಗುರುವಾರ ಬೆಳಿಗ್ಗೆ ರೈತರು ಹೊಲಕ್ಕೆ ಹೋದಾಗ ಬಿಳಿ ಬಣ್ಣದ ಬಲೂನ್‌ ನೋಡಿದರು. ತೆಗೆದು ಪರಿಶೀಲಿಸಿದಾಗ ಒಳಗಡೆ ಸಣ್ಣ‍ಪುಟ್ಟ ಎಲೆಕ್ಟ್ರಾನಿಕ್‌ ಸಾಮಗ್ರಿಗಳು ಇರುವುದು ಗೊತ್ತಾಯಿತು. ಗೊಂದಲಕ್ಕೆ ಒಳಗಾದ ಜನ ತಕ್ಷಣ ಪೊಲೀಸರಿಗೆ ಕರೆ ಮಾಡಿದರು.

ಬಲೂನ್‌ ಬಿದ್ದ ಸುದ್ದಿ ತಿಳಿದು ಸುತ್ತಮುತ್ತಲಿನ ಅಪಾರ ಜನ ಅದನ್ನು ನೋಡಲು ಮುಗಿಬಿದ್ದರು. ನಂತರ ಡಿವೈಎಸ್ಪಿ ರವಿ ನಾಯಕ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದರು.

ಬಲೂನಿನಲ್ಲಿ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತು ಇಲ್ಲ ಎಂದು ಖಚಿತಪಡಿಸಿದರು. ನಂತರ ಬೆಳಗಾವಿಯ ವಿಜ್ಞಾನ ಕೇಂದ್ರಕ್ಕೆ ತಂದು ಪರಿಶೀಲನೆ ನಡೆಸಿದರು.

ಈ ಬಲೂನ್‌ ಹವಾಮಾನ ಪರಿಸ್ಥಿತಿ ಪರಿಶೀಲನೆಗಾಗಿ ಹಾರಿಬಿಡಲಾಗಿದೆ. ಇದನ್ನು ಗೋವಾ ವಿಜ್ಞಾನಿಗಳು ಬಿಟ್ಟಿರುವ ಸಾಧ್ಯತೆ ಇದೆ. ಒಂದು ಬಾರಿ ಹಾರಿಸಿದರೆ ಮತ್ತೆ ಮೂಲ ಸ್ಥಳಕ್ಕೆ ತರಿಸಿಕೊಳ್ಳುವುದಿಲ್ಲ. ಸಾಧ್ಯವಿದ್ದಷ್ಟು ದೂರ ಹಾರಿದ ಬಳಿಕ ಬಲೂನ್‌ ತಾನಾಗಿಯೇ ಬೀಳುತ್ತದೆ. ಹಾಗಾಗಿ, ಇದರ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಪ್ರತಿಕ್ರಿಯೆ ನೀಡಿದರು.