ಮನೆ ರಾಜಕೀಯ ಸಚಿವ ವಿ.ಸೋಮಣ್ಣರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು: ಅಭಿಮಾನಿಗಳ ಒತ್ತಾಯ

ಸಚಿವ ವಿ.ಸೋಮಣ್ಣರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು: ಅಭಿಮಾನಿಗಳ ಒತ್ತಾಯ

0

ಮೈಸೂರು: ಯಾವುದೇ ಕಾರಣಕ್ಕೂ ಸಚಿವ ವಿ ಸೋಮಣ್ಣ ಅವರಿಗೆ ಯಾವುದೇ ಕಾರಣಕ್ಕೆ ಪಕ್ಷ ಬಿಡುವ ಅವಕಾಶವನ್ನು ವರಿಷ್ಠರು ಕೊಡಬಾರದು. 150 ಸ್ಥಾನ ಗೆಲ್ಲಬೇಕಾದರೆ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಮೈಸೂರು– ಚಾಮರಾಜನಗರ ಜಿಲ್ಲೆಗಳ ವಿ.ಸೋಮಣ್ಣ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಆಗ್ರಹಿಸಿದರು.

ಪಕ್ಷ ತೊರೆಯುವ ವದಂತಿ ಹಿನ್ನೆಲೆಯಲ್ಲಿ ಗುರುವಾರ ವಿದ್ಯಾರಣ್ಯಪುರಂನಲ್ಲಿ ನಡೆದ ಬೆಂಬಲಿಗರ ಸಮಾವೇಶದಲ್ಲಿ ಪಕ್ಷದಲ್ಲಿಯೇ ಉಳಿಸಿಕೊಳ್ಳುವಂತೆ ನಿರ್ಣಯ ಕೈಗೊಂಡರು. ‘ವಿ.ಸೋಮಣ್ಣ ಅವರೊಂದಿಗೆ ನಾವಿದ್ದೇವೆ’ ಪ್ಲೇಕಾರ್ಡ್ ಪ್ರದರ್ಶಿಸಿ ಘೋಷಣೆ ಕೂಗಿದರು.

ಮುಖಂಡ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಮಾತನಾಡಿ, ಸೋಮಣ್ಣ ಅವರ ಬೆನ್ನೆಲುಬಾಗಿ ಅವರೊಂದಿಗೆ ಹೆಜ್ಜೆಹಾಕುವ ಲಕ್ಷ ಲಕ್ಷ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕ್ರಿಯಾಶೀಲ ವ್ಯಕ್ತಿತ್ವವನ್ನು ಬಳಸಿಕೊಳ್ಳಬೇಕು. ಪಕ್ಷ ಸಂಘಟನೆಯಲ್ಲಿ ಅವರಿಗಿರುವ ಅನುಭವ ಉಪಯೋಗಿಸಿಕೊಂಡು 150 ಸ್ಥಾನ ಗೆಲ್ಲುವ ಗುರಿಯನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಯಮಿ ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ರಾಜ್ಯ ಬಜೆಟ್‌ನಲ್ಲಿ ₹ 1,200 ಕೋಟಿ ವೆಚ್ಚದ ಯೋಜನೆಗಳಿಗೆ ಅನುದಾನ ನೀಡದಿರುವುದು ಸೋಮಣ್ಣ ಅವರಿಗೆ ಬೇಸರ ತಂದಿದೆ. ಪಕ್ಷ ಕೊಟ್ಟಿರುವ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಅವರನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.

45 ವರ್ಷದಲ್ಲಿ ಹಲವು ಪಕ್ಷಗಳಿಂದ ಗೆಲುವು ಸಾಧಿಸಿದ್ದಾರೆ. ದಣಿವರಿಯದೇ ಕೆಲಸವನ್ನು ಮಾಡಿದ್ದಾರೆ. ಬಿಜೆಪಿ ನಾಯಕರು ನೀವು ಇಷ್ಟರಲ್ಲೇ ಇರಬೇಕು ಎಂಬ ಗೆರೆ ಹಾಕುತ್ತಿದ್ದಾರೆ. ಗೆರೆಗಳನ್ನು ಹಾಕಿದರೆ ಅದು ಬಿಜೆಪಿಗೆ ನಷ್ಟವಾಗಲಿದೆ ಎಂದು ಎಚ್ಚರಿಸಿದರು.

ಉಪಚುನಾವಣೆಗಳಲ್ಲಿ ವಹಿಸಿದ ಜವಾಬ್ದಾರಿಯನ್ನು ಸಾಬೀತು ಮಾಡಿದ್ದಾರೆ. ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಸಂಘಟನೆಯ ಅನುಭವವನ್ನು ಬಳಸಿಕೊಳ್ಳದೇ ಹೋದರೆ ಬಿಜೆಪಿಗೆ ನಷ್ಟವಾಗಲಿದೆ ಎಂದರು.

ರೈತ ಮುಖಂಡ ಮಲ್ಲೇಶ್ ಸಮಾವೇಶದ ನಿರ್ಣಯ ಮಂಡಿಸಿದರು.

ಹನೂರು ಕ್ಷೇತ್ರದ ಬಿಜೆಪಿ ಮುಖಂಡ ನಿಶಾಂತ್, ಮುಖಂಡರಾದ ಪುಟ್ಟಬುದ್ದಿ, ಬಾಲರಾಜ್, ಜೋಗಿ ಮಂಜು, ಉಪ್ಪಾರ ಪೀಠದ ಮಂಜುನಾಥ ಸ್ವಾಮೀಜಿ, ಚಾಮುಲ್ ನಿರ್ದೇಶಕ ಬಸವರಾಜ್, ಬಿಜೆಪಿ ಮುಖಂಡರಾದ ದೊಡ್ಡಹುಂಡಿ ಜಗದೀಶ್, ಸೋಮನಾಯಕ, ಉದ್ಯಮಿ ಯು.ಎಸ್.ಶೇಖರ್, ಕೊಡಸೋಗೆ ಶಿವಬಸಪ್ಪ, ನಿಟ್ರೆ ನಾಗರಾಜಪ್ಪ, ಚಾಮರಾಜನಗರ ‌ಎಪಿಎಂಸಿ ಅಧ್ಯಕ್ಷ ರವಿ ಕಮ್ಮರಹಳ್ಳಿ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುಂದರಪ್ಪ, ರಾಜಶೇಖರ್, ಶೈಲಜಾ ಮಲ್ಲೇಶ್, ಪಾಪಣ್ಣ, ಅರಕಲವಾಡಿ ಲಿಂಗಪ್ಪ, ವೆಂಕಟರಮಣಸ್ವಾಮಿ, ನಿರಂಜನಬಾಬು ಇದ್ದರು.