ಮನೆ ಕ್ರೀಡೆ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಪಡೆದ ಆಟಗಾರರ ಪಟ್ಟಿ

ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಪಡೆದ ಆಟಗಾರರ ಪಟ್ಟಿ

0

ಪ್ರತಿ IPL ಸೀಸನ್​ನಲ್ಲಿಯೂ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಇನ್ನೇನು ಮಾರ್ಚ್ 26ರಿಂದ ಐಪಿಎಲ್ 15ನೇ ಸೀಸನ್ ಆರಂಭವಾಗಲಿದ್ದು, ಇದುವರೆಗೆ 14 ಸೀಸನ್ ಗಳಲ್ಲಿ ಆರೆಂಜ್ ಕ್ಯಾಪ್ ಪ್ರಶಸ್ತಿ ಪಡೆದ ಆಟಗಾರರ ಬಗೆಗಿನ ಮಾಹಿತಿ ಇಲ್ಲಿದೆ.

ಆಸ್ಟ್ರೇಲಿಯಾದ ಶಾನ್ ಮಾರ್ಷ್ IPL ನ ಆರಂಭಿಕ ಋತುವಿನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರರಾಗಿ ಆರೆಂಜ್ ಕ್ಯಾಪ್ ಪಡೆದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಶಾನ್ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಅವರು ಮೊದಲ ಸೀಸನ್​ನಲ್ಲಿ 11 ಪಂದ್ಯಗಳನ್ನು ಆಡಿ 616 ರನ್ ಗಳಿಸಿದರು. ಇದರಲ್ಲಿ 5 ಅರ್ಧ ಶತಕ ಮತ್ತು 1 ಶತಕವಿತ್ತು.2009 ರಲ್ಲಿ ಎರಡನೇ IPL ಋತುವಿನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಕೂಡ ಆರೆಂಜ್ ಕ್ಯಾಪ್ ಪಡೆದರು. ಚೆನ್ನೈ ಪರ ಕಣಕ್ಕೆ ಇಳಿದ ಮ್ಯಾಥ್ಯೂ ಹೇಡನ್ 12 ಪಂದ್ಯಗಳಲ್ಲಿ 572 ರನ್ ಗಳಿಸಿದ್ದರು. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಸಚಿನ್ ತೆಂಡೂಲ್ಕರ್ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2010ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಸಚಿನ್ 15 ಪಂದ್ಯಗಳಲ್ಲಿ 618 ರನ್ ಗಳಿಸಿದ್ದರು. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಐಪಿಎಲ್ 2011, 2012 ಸೀಸನ್‌ಗಳಲ್ಲಿ ಯುನಿವರ್ಸಲ್ ಬಾಸ್ , ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಆರ್​ಸಿಬಿ ಪರ ಆಡಿ ಆರೆಂಜ್ ಕ್ಯಾಪ್ ಪಡೆದರು.

ಇವರು 2011ರಲ್ಲಿ 3 ಅರ್ಧ ಶತಕ & 2 ಶತಕಗಳು ಸೇರಿ ಒಟ್ಟು 608 ರನ್ ಮತ್ತು 2012ರಲ್ಲಿ 7 ಅರ್ಧ ಶಕತ & 1 ಶತಕದಿಂದ 733 ರನ್​ ಗಳಿಸಿದ್ದರು. ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ 2013ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಡೆದರು. ಚೆನ್ನೈ ಪರ ಕಣಕ್ಕೆ ಇಳಿದ ಅವರು 17 ಪಂದ್ಯಗಳಲ್ಲಿ 733 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕಗಳಿವೆ. 2014 ರ ಋತುವಿನಲ್ಲಿ KKR ಅನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ 16 ಪಂದ್ಯಗಳಲ್ಲಿ 660 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳನ್ನು ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆದರು.

ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವಿದೇಶಿ ಆಟಗಾರ. ವಾರ್ನರ್ ಸತತ ಮೂರು ಬಾರಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಸನ್ ರೈಸರ್ಸ್ ಪರವಾಗಿ ಮೂರೂ ಬಾರಿ ಆರೆಂಜ್ ಕ್ಯಾಪ್ ಪಡೆದಿರುವುದು ವಿಶೇಷ. 2015ರಲ್ಲಿ 14 ಪಂದ್ಯಗಳಲ್ಲಿ 562 ರನ್, 2017ರಲ್ಲಿ 14 ಪಂದ್ಯಗಳಲ್ಲಿ 671 ರನ್, 2019ರಲ್ಲಿ 12 ಪಂದ್ಯಗಳಲ್ಲಿ 692 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ.

2016ರ ಐಪಿಎಲ್ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ತಮ್ಮ ವಿಶ್ವರೂಪ ತೋರಿಸಿದ್ದರು. ಅವರು 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕ ಹಾಗೂ 4 ಶತಕಗಳಿವೆ. ಇದು ಐಪಿಎಲ್ 15 ಸೀಸನ್‌ಗಳಲ್ಲಿ ಅತ್ಯಧಿಕ ರನ್‌ ಅಲ್ಲದೇ ಇಷ್ಟು ವರ್ಷದ ಐಪಿಎಲ್​ನಲ್ಲಿ ಒಂದು ಸೀಸನ್​ನ ಓರ್ವ ಆಟಗಾರನ ಅತ್ಯಧಿಕ ಸ್ಕೋರ್ ಆಗಿದೆ.

2018ರಲ್ಲಿ ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ಪರ 17 ಪಂದ್ಯಗಳಲ್ಲಿ 735 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದರಲ್ಲಿ 8 ಅರ್ಧಶತಕಗಳು ಸೇರಿವೆ. 2020 ರಲ್ಲಿ ಪಂಜಾಬ್ ಕಿಂಗ್ಸ್‌ ಪರ ಆಟವಾಡಿದ ಕನ್ನಡಿಗ KL ರಾಹುಲ್, 14 ಪಂದ್ಯಗಳಲ್ಲಿ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರು. ಇದರಲ್ಲಿ 5 ಅರ್ಧ ಶತಕ ಮತ್ತು ಒಂದು ಶತಕ ಸೇರಿವೆ. ಕಳೆದ ವರ್ಷ ಎರಡು ಹಂತದ ಐಪಿಎಲ್ ಋತುವಿನಲ್ಲಿ ಚೆನ್ನೈ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಸ್ವೀಕರಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಅವರು 16 ಪಂದ್ಯಗಳಲ್ಲಿ 635 ರನ್ ಗಳಿಸಿದರು. ಇದರಲ್ಲಿ4 ಅರ್ಧ ಶತಕಗಳು ಹಾಗೂ 1 ಶತಕ ಸೇರಿದ್ದವು.