ಮನೆ ಸುದ್ದಿ ಜಾಲ ಬಿಆರ್’ಟಿ: ಸಫಾರಿಗೆ ಹೋದವರಿಗೆ ಮೂರು ಹುಲಿಗಳ ದರ್ಶನ

ಬಿಆರ್’ಟಿ: ಸಫಾರಿಗೆ ಹೋದವರಿಗೆ ಮೂರು ಹುಲಿಗಳ ದರ್ಶನ

0

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿ ಸೋಮವಾರ ಬೆಳಿಗ್ಗೆ ಸಫಾರಿ ಹೋದವರಿಗೆ ಮೂರು ಹುಲಿಗಳು ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿರುವುದು ಪ್ರವಾಸಿಗರ ಮನಸೂರೆಗೊಂಡಿದೆ.

ಸಫಾರಿ ಮಾರ್ಗದಲ್ಲಿ ತಾಯಿ ಹುಲಿ ತನ್ನ ಎರಡು ಮರಿಗಳೊಂದಿಗೆ ಇರುವುದನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.

ಹುಲಿಗಳ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಆರ್‌’ಟಿ ಅರಣ್ಯದಲ್ಲಿ ಕೆ.ಗುಡಿಯಲ್ಲಿ ಸಫಾರಿ ಸೌಲಭ್ಯ ಇದೆ. ಸಫಾರಿ ಹೋಗುವ ಪ್ರವಾಸಿಗರಿಗೆ ಇಲ್ಲಿ ಹುಲಿಗಳು ಕಾಣುವುದು ಅಪರೂಪ. ಮೂರ್ನಾಲ್ಕು ವ್ಯಾಘ್ರಗಳು ಒಟ್ಟಾಗಿ ಕಾಣಿಸಿಕೊಂಡಿರುವ ನಿದರ್ಶನ ತುಂಬಾ ಕಡಿಮೆ.

ಸಫಾರಿ ವಲಯದಲ್ಲಿ ಇತರ ಪ್ರಾಣಿಗಳು ಕಾಣಸಿಕ್ಕಿದರೂ, ಹುಲಿ ಯಾವಾಗಲೂ ಸಿಗುವುದಿಲ್ಲ. ಸೋಮವಾರ ಎರಡು ಮರಿಗಳೊಂದಿಗೆ ತಾಯಿ ಅಡ್ಡಾಡುತ್ತಿರುವುದು ಕಂಡು ಬಂದಿದೆ. ಪ್ರವಾಸಿಗರು ಖುಷಿಯಾಗಿದ್ದಾರೆ ಎಂದು ಕೆಗುಡಿ ವಲಯ ಆರ್‌’ಎಫ್‌’ಒ ವಿನೋದ್‌ ಗೌಡ ಮಾಹಿತಿ ನೀಡಿದರು.