ಬೆಂಗಳೂರು: ಐದು ವರ್ಷಗಳ ಲೈಂಗಿಕ ಸಂಬಂಧದ ನಂತರ ಅತ್ಯಾಚಾರ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪದ ವ್ಯಕ್ತಿಯ ವಿರುದ್ಧದ ಆರೋಪವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ಕಾರಣ ಲೈಂಗಿಕ ಕ್ರಿಯೆಗೆ ಒಪ್ಪಿಕೊಂಡೆ. ಆದರೆ, ಆತ ತನ್ನನ್ನು ಮೋಸ ಮಾಡಿ ಹೊರ ನಡೆದ ಎಂದು ಮಹಿಳೆ ಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ತೀರ್ಪಿನ ವೇಳೆ ಪ್ರಸ್ತಾಪಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ) ಅವರು ಈ ಪ್ರಕರಣದಲ್ಲಿ ಸಮ್ಮತಿಯ ಅನುಸಾರ ಲೈಂಗಿಕ ಕ್ರಿಯೆ ನಡೆದಿದೆ. ಅದೂ, ‘’ಒಮ್ಮೆಯಲ್ಲ, 2 ಅಥವಾ 3 ಬಾರಿಯಲ್ಲ ಅಥವಾ ದಿನಗಳ ಕಾಲ ಹಾಗೂ ತಿಂಗಳುಗಳ ಕಾಲವೂ ಅಲ್ಲ. ಆದರೆ, ಹಲವಾರು ವರ್ಷಗಳವರೆಗೆ, ಸರಿಯಾಗಿ ಹೇಳುವುದಾದರೆ ಐದು ವರ್ಷಗಳವೆರೆಗೆ’’ ಸಮ್ಮತಿಯ ಲೈಂಗಿಕ ಕ್ರಿಯೆ ನಡೆದಿದೆ.
“ಆದ್ದರಿಂದ, ಮಹಿಳೆಯ ಒಪ್ಪಿಗೆಯನ್ನು ಐದು ವರ್ಷಗಳ ಕಾಲ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಸಿಕೊಳ್ಳಲಾಗಿದೆ ಎಂದು ಹೇಳಲಾಗುವುದಿಲ್ಲ. ಇದು ಸಂಬಂಧದ ಸಮಯ ಮತ್ತು ಇಬ್ಬರ ನಡುವಿನ ಅಂತಹ ಸಂಬಂಧದ ಅವಧಿಯಲ್ಲಿನ ಕ್ರಿಯೆಗಳು ಐಪಿಸಿಯ 375, ಸೆಕ್ಷನ್ 376 ರ ಅಡಿಯಲ್ಲಿ ಅಪರಾಧವಾಗಲು ಈ ವಿಭಾಗದ ಅಂಶಗಳ ಕಠಿಣತೆಯನ್ನು ತೆಗೆದುಹಾಕುತ್ತದೆ’’ ಎಂದು ನ್ಯಾಯಮೂರ್ತಿಗಳು ಹೇಳಿದರು.
ಸೆಕ್ಷನ್ 375 ಅಂದರೆ ಒಪ್ಪಿಗೆಯಿಲ್ಲದೆ ಮತ್ತು ಮಹಿಳೆಯ ಒಪ್ಪಿಗೆಯ ವಿರುದ್ಧ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎಂದು ಪರಿಗಣಿಸುತ್ತದೆ. ಆದರೆ ಸೆಕ್ಷನ್ 376 ಅಂದರೆ ಅತ್ಯಾಚಾರಕ್ಕೆ ಶಿಕ್ಷೆಯನ್ನು ನೀಡುತ್ತದೆ.
ಬೆಂಗಳೂರಿನ ವ್ಯಕ್ತಿ 53ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಪ್ರಶ್ನಿಸಿದ್ದರು. ಅಲ್ಲದೆ, ತಾವು ಮತ್ತು ದೂರುದಾರರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೆವು ಮತ್ತು ಮದುವೆಯಾಗಲು ಬಯಸಿದ್ದೆವು. ಆದರೆ, ಬೇರೆ ಜಾತಿ ಹಿನ್ನೆಲೆ ಮದುವೆ ಸಾದ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ಆರೋಪಿ ಮತ್ತು ದೂರುದಾರರ ನಡುವೆ ಹಣಕಾಸಿನ ವಹಿವಾಟು ನಡೆದಿದೆ ಎಂದ ಮಾತ್ರಕ್ಕೆ ಐಪಿಸಿಯ ಸೆಕ್ಷನ್ 406 ರ ಅಡಿಯಲ್ಲಿ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಅಂಶವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೂ ಸೆಕ್ಷನ್ 323 ಮತ್ತು ಸೆಕ್ಷನ್ 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಪರಾಧಗಳಿಗಾಗಿ ವ್ಯಕ್ತಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮದುವೆಯ ನೆಪದಲ್ಲಿ ತನ್ನೊಂದಿಗೆ ಹಲವಾರು ಸಂದರ್ಭಗಳಲ್ಲಿ ಲೈಂಗಿಕ ಸಂಬಂಧ ಹೊಂದಿದ್ದ ಮತ್ತು ಅದು ಅತ್ಯಾಚಾರವೆಸಗಿದಂತೆ ಎಂದು ಆರೋಪಿಸಿ ದೂರುದಾರ ಮಹಿಳೆ ಪುರುಷನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಆದರೆ, ಇದು ಒಮ್ಮತದಲ್ಲಿ ನಡೆದಿರುವ ಲೈಂಗಿಕ ಕ್ರಿಯೆ. ಅತ್ಯಾಚಾರಕ್ಕೆ ಸಮನಾಗುವುದಿಲ್ಲ ಎಂದು ವ್ಯಕ್ತಿ ವಾದ ಮಾಡಿದ್ದರು.
ಅಲ್ಲದೆ, ಸುಳ್ಳು ಭರವಸೆ ಅಥವಾ ಮದುವೆಯ ನೆಪದಿಂದ ಒಪ್ಪಿಗೆ ಪಡೆದರೆ ಅದು ಅತ್ಯಾಚಾರಕ್ಕೆ ಸಮ ಎಂದೂ ದೂರುದಾರರು ಪ್ರತಿವಾದಿಸಿದ್ದರು.