ರಚನೆ : ಶ್ರೀ ಪುರಂದರ ದಾಸರು
ಕಾಗದ ಬಂದಿದೆ ನಮ್ಮ ಕಮಲನಾಭನದು, ಈ
ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ||
ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ
ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ , ನಮ್ಮ
ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ||
ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ , ನಮ್ಮ
ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ||
ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ , ನಮ್ಮ
ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ ||