ಮನೆ ಅಪರಾಧ ಎಂಎಲ್ ಸಿ ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಎಂಎಲ್ ಸಿ ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

0

ಹಾವೇರಿ: ಬೀರೇಶ್ವರ ನಗರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ತಡರಾತ್ರಿವರೆಗೆ ಶೋಧ ಕಾರ್ಯ ಮುಂದುವರೆದಿತ್ತು.

ಶಂಕರ್‌ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಂಗ್ರಹಿಸಿಟ್ಟಿದ್ದ ಶಂಕರ್‌ ಭಾವಚಿತ್ರ ಇರುವ ಸೀರೆ ಬಾಕ್ಸ್,‌ ತಟ್ಟೆ– ಲೋಟ ಹಾಗೂ ಎಲ್‌ಕೆಜಿಯಿಂದ ಪದವಿ ಕಾಲೇಜುಗಳವರೆಗೆ ಹಂಚಲು ತಂದಿರುವ ಸ್ಕೂಲ್‌ ಬ್ಯಾಗ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

6000ಕ್ಕೂ ಹೆಚ್ಚು ಸೀರೆ, 9000 ಕ್ಕೂ ಹೆಚ್ಚು ಶಾಲಾ ಕಾಲೇಜು ಬ್ಯಾಗ್ ಗಳು ಸೇರಿದಂತೆ ತಟ್ಟೆಲೋಟಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಸೀಜ್ ಆಗಿರುವ ವಸ್ತುಗಳನ್ನು ಅಧಿಕಾರಿಗಳು ಪೊಲೀಸರ‌ ವಶಕ್ಕೆ ನೀಡಿದ್ದಾರೆ.

ಸುಮಾರು 8 ಕೊಟಿ ರೂಪಾಯಿ ವೆಚ್ಚದ ವಸ್ತುಗಳು ಪತ್ತೆಯಾಗಿವೆ ಎಂದು ಅಂದಾಜಿಸಲಾಗಿದ್ದು, ಈ ಎಲ್ಲ ವಸ್ತುಗಳ GST ಬಿಲ್ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ ಶಂಕರ್, ಬಿಲ್ ಕೊಡಲು ಅವಕಾಶ ಕೇಳಿದ್ದಾರೆ. ಒಂದು ವೇಳೆ ಸರಿಯಾದ ಜಿಎಸ್ ಟಿ ಬಿಲ್ ಇಲ್ಲದಿದ್ರೆ ದಂಡ ವಿಧಿಸುವ ಸಾಧ್ಯತೆ ಇದೆ.

ಇನ್ನು ಚುನಾವಣೆ ನಿಯಮ ಉಲ್ಲಂಘಣೆ ಮಾಡಿದ್ದಾರಾ ಎಂಬುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸಹ ದಾಳಿ ಮಾಡಿದ್ದು, ಎಲ್ಲ ದಾಖಲೆಗಳನ್ನು ಕೊರ್ಟ್ ಮುಂದೆ ಹಾಜರುಪಡಿಸಿ, ಒಪ್ಪಿಗೆ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗುವುದು  ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮಾಹಿತಿ ನೀಡಿದ್ದಾರೆ.

ಹಾವೇರಿ ಉಪವಿಭಾಗಾಧಿಕಾರಿ ಅವರಿಗೆ ದಾಖಲೆ ಪತ್ರ, ಬಿಲ್‌ ಮತ್ತು ಸ್ಟಾಕ್‌ ಚೆಕ್‌ ತಪಾಸಣೆ ನಡೆಸಲು ವಾಣಿಜ್ಯ ತೆರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಆರ್.ಶಂಕರ್ ನಿವಾಸದ ಮೇಲೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಮಾಜಿ ಸಚಿವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.