ಮನೆ ಕಾನೂನು ದೇವರ ಪೂಜೆ ಮನೆಗಳಲ್ಲೇ ಮಾಡಿಕೊಳ್ಳಿ, ಪರಿಸರ ಹಾಳು ಮಾಡಲು ಅವಕಾಶ ನೀಡಲಾಗದು: ಹೈಕೋರ್ಟ್

ದೇವರ ಪೂಜೆ ಮನೆಗಳಲ್ಲೇ ಮಾಡಿಕೊಳ್ಳಿ, ಪರಿಸರ ಹಾಳು ಮಾಡಲು ಅವಕಾಶ ನೀಡಲಾಗದು: ಹೈಕೋರ್ಟ್

0

ಬೆಂಗಳೂರು: ‘ದೇವರ ಪೂಜೆ ಮನೆಗಳಲ್ಲೇ ಮಾಡಿಕೊಳ್ಳಿ, ಪರಿಸರ ಹಾಳು ಮಾಡಿ ಪೂಜೆ ಮಾಡಿದರೆ ಏನರ್ಥ. ಅದಕ್ಕೆ ಅವಕಾಶ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯ ನೀಡಿದೆ.

ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ ಹಾಗೂ ಶಿವನಮೂರ್ತಿ ಪ್ರತಿಷ್ಠಾಪನೆ ಆಕ್ಷೇಪಿಸಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತು ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ವ್ಯಾಜ್ಯದಲ್ಲಿರುವ ಮೂರು ಎಕರೆ ಹೊರತುಪಡಿಸಿ ಮಲ್ಲತ್ತಹಳ್ಳಿ ಕೆರೆಯ ಒಟ್ಟು 71 ಎಕರೆ ಪ್ರದೇಶವನ್ನು ಸಂರಕ್ಷಿಸಬೇಕು. ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ, ವ್ಯಕ್ತಿ, ವ್ಯಕ್ತಿಗಳ ಗುಂಪು, ಸಂಘಟನೆಗಳಿಗೆ ಈ ಕೆರೆ ಪ್ರದೇಶದಲ್ಲಿ ಯಾವುದೇ ರೀತಿಯ ಶಾಶ್ವತ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಕೆರೆ ಅಂಗಳದಲ್ಲಿ ಕಟ್ಟಿರುವ ಕಲ್ಯಾಣಿಯಲ್ಲಿ ನಿಗದಿಯಂತೆ ಗಣೇಶ, ದುರ್ಗಾ ಮೂರ್ತಿಗಳ ವಿಸರ್ಜನೆ ಸೇರಿ ನಿರ್ದಿಷ್ಟ ಚಟುವಟಿಕೆಗಳಿಗೆ ಸೀಮಿತ ಅವಧಿಗೆ ಮಾತ್ರ ಅನುಮತಿ ನೀಡಬೇಕು. ಅದು ಮುಗಿದ ಬಳಿಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಕಲ್ಯಾಣಿಯ ಕಲುಷಿತ ನೀರು ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿತು.

ಅಲ್ಲದೆ, ಈ ವಿಚಾರದಲ್ಲಿ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಇತರೆ ಪ್ರಾಧಿಕಾರಗಳು ವ್ಯಾಜ್ಯ ಹುಟ್ಟು ಹಾಕಲಾರವು. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆಯೆಂಬ ಭರವಸೆಯನ್ನು ಕೋರ್ಟ್ ಹೊಂದಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.

ಪೂಜೆ ಮನೆಯಲ್ಲಿ ಮಾಡಿಕೊಳ್ಳಿ!

ಇದಕ್ಕೂ ಮುನ್ನ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಶಿವರಾತ್ರಿ ಆಚರಣೆಗೆಂದು ತಾತ್ಕಾಲಿಕವಾಗಿ ಕಲ್ಯಾಣಿಯಲ್ಲಿ ಶಿವನ ಮೂರ್ತಿ ಸ್ಥಾಪಿಸಲಾಗಿತ್ತು. ನಂತರ ಅದನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ಕಲ್ಯಾಣಿಯಲ್ಲಿ ಮೂರ್ತಿ ಸ್ಥಾಪನೆ ಮತ್ತಿತರ ಕಾಮಗಾರಿ ಕೈಗೊಳ್ಳುವುದರಿಂದ ಕಲುಷಿತ ನೀರು ಕೆರೆಗೆ ಸೇರುತ್ತದೆಂಬುದು ಅರ್ಜಿದಾರರ ಆತಂಕ. ಹಾಗಿದ್ದಾಗ, ಪೂಜೆ ಮನೆಗಳಲ್ಲಿ ಮಾಡಿಕೊಳ್ಳಿ, ಕಲ್ಯಾಣಿ ಏಕೆ ಬೇಕು? ಪರಿಸರ ಕಲುಷಿತಗೊಳಿಸಿ ಪೂಜೆ ಮಾಡುವುದು ಏಕೆ ಎಂಬುದೇ ಅರ್ಥವಾಗಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು.

ಅಲ್ಲದೆ, ಕೆರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲು ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಕಾಯಿದೆಯ ಸೆಕ್ಷನ್ 12ರ ಅನ್ವಯ ಅವಕಾಶವಿಲ್ಲ. ಹೀಗಿದ್ದಾಗ, ಅದಕ್ಕೆ ಅನುಮತಿ ನೀಡಿದ್ದು ಯಾರು? ಹೇಗೆ ಅನುಮತಿ ಕೊಟ್ಟರು? ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.

ಇದೆಲ್ಲಾ ನಾವು ಮಾಡಿದ ಕರ್ಮ!

ಈ ನಡುವೆ, ಬಿಬಿಎಂಪಿ ಮತ್ತು ಬಿಡಿಎ ವ್ಯಾಜ್ಯಗಳನ್ನು ಹುಟ್ಟು ಹಾಕುತ್ತವೆ. ಇವೆರಡೂ ಸಂಸ್ಥೆಗಳು ಸರಿಯಾಗಿದ್ದರೆ ವ್ಯಾಜ್ಯಗಳು ಮತ್ತು ಸಮಸ್ಯೆಗಳೇ ಇರುತ್ತಿರಲಿಲ್ಲ. ಅವರೇ ಯಾಮಾರಿಸಿದರೆ ಏನು ಮಾಡುವುದು? ಕಲುಷಿತ ನಗರ, ಕಲುಷಿತ ಸಮಾಜದಲ್ಲಿ ನಾವಿದ್ದೇವೆ. ಇಡೀ ಜನ ಮಾಲಿನ್ಯದಲ್ಲಿ ಇರುವಂತಾಗಿದೆ. ಇದೆಲ್ಲಾ ನಾವು ಮಾಡಿದ ಕರ್ಮ. ಪರಿಸ್ಥಿತಿ ಹೀಗೇ ಇದ್ದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ನಮಗೆ ಹಿಡಿಶಾಪ ಹಾಕುತ್ತಾರೆ ಎಂದು ತೀಕ್ಷ್ಣವಾಗಿ ನುಡಿಯಿತು.