ರಾಮನಗರ:ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥವಲ್ಲ. ಕೇವಲ ಆರು ಪಥದ ರಸ್ತೆ. ಅಷ್ಟಕ್ಕೆ ಮಾತ್ರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಆಗಿರುವುದು ಎಂದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ತಿಳಿಸಿದ್ದಾರೆ.
ಕಣಮಿಣಕಿ ಟೋಲ್ ಬಳಿ ಬುಧವಾರ ಕನ್ನಡಪರ ಸಂಘಟನೆಗಳ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಅವರು ಸರ್ವೀಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.
ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಹೋದರೆ ಟೋಲ್ ಕಟ್ಟುವವರು ಯಾರು? ಹೀಗಾಗಿಯೇ ನಾವು ಸರ್ವೀಸ್ ರಸ್ತೆ ಪೂರ್ಣ ಮಾಡಿಲ್ಲ. ವಾಸ್ತವದಲ್ಲಿ ಸರ್ವೀಸ್ ರಸ್ತೆಗಳು ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ ಎಂದು ಅವರು ಸಬೂಬು ಹೇಳಿದರು.
ಕಡೆಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ಆಗದೇ ಸುದ್ದಿಗೋಷ್ಠಿಯಿಂದಲೇ ಹೊರನಡೆದರು.