ಮಾರ್ಚ್ 21ರ ಮಂಗಳವಾರದಿಂದ ಸಿಜೆಐ ಡಿ ವೈ ಚಂದ್ರಚೂಡ್, ಅವರ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ ಎಸ್ ನರಸಿಂಹ, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ರಚಿಸಲಾಗಿದೆ.
ಕಾಕ್ಸ್ ಮತ್ತು ಕಿಂಗ್ಸ್ ವರ್ಸಸ್ ಎಸ್‌ಎಪಿ ಪ್ರೈ.ಲಿ. ಪ್ರಕರಣವು ಮಧ್ಯಸ್ಥಿಕೆ ಪ್ರಕ್ರಿಯೆಯಿಂದಾಗಿ ಮೂಡಿದ್ದು, ಈ ಪ್ರಕರಣದಲ್ಲಿ ಸಾಂವಿಧಾನಿಕ ಪೀಠವು ‘ಸಮೂಹ ಸಂಸ್ಥೆ ಸಿದ್ಧಾಂತ’ವನ್ನು ಪರಿಶೀಲನೆಗೆ ಒಳಪಡಿಸಲಿದೆ. ಒಪ್ಪಂದದಲ್ಲಿ ಭಾಗವಾಗದ ಸಮೂಹ ಸಂಸ್ಥೆಗಳ ಸದಸ್ಯನಾದ ಸಂಸ್ಥೆಯೊಂದು ಸಮೂಹ ಸಂಸ್ಥೆಗಳು ಒಪ್ಪಿರುವ ಮಧ್ಯಸ್ಥಿಕೆ ಒಪ್ಪಂದಕ್ಕೆ ಒಳಪಡಲಿದೆಯೇ ಎನ್ನುವ ಅಂಶದ ಸುತ್ತಲಿನ ಕಾನೂನು ಅಂಶಗಳನ್ನು ಅದು ವಿಷದವಾಗಿ ಪರಿಶೀಲಿಸಲಿದೆ.
ಸಾಂವಿಧಾನಿಕ ಪೀಠ ಆಲಿಸಲಿರುವ ಮತ್ತೊಂದು ಪ್ರಕರಣವು ತೇಜ್ ಪ್ರಕಾಶ್ ಪಾಠಕ್ ಮತ್ತು ಇತರರು ವರ್ಸಸ್ ರಾಜಸ್ಥಾನ ಹೈಕೋರ್ಟ್ ಮತ್ತು ಇತರರು ಆಗಿದೆ. ಒಮ್ಮೆ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾದ ನಂತರ ರಾಜ್ಯ ಸಂಸ್ಥೆಗಳು, ಪ್ರಾಧಿಕಾರಗಳು ಅರ್ಹತಾ ನಿಯಮಗಳನ್ನು ಬದಲಾಯಿಸಬಹುದೇ ಎಂಬ ಅಂಶವನ್ನು ನ್ಯಾಯಾಲಯವು ಪರಾಮರ್ಶೆಗೆ ಒಳಪಡಿಸಲಿದೆ.