ಮನೆ ಕಾನೂನು ಮತದಾನ ಆಯ್ಕೆ: ಮತದಾನ ಕಡ್ಡಾಯ ಕೋರಿದ್ದ ಬಿಜೆಪಿಯ ಅಶ್ವಿನಿ ಕುಮಾರ್‌ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್‌...

ಮತದಾನ ಆಯ್ಕೆ: ಮತದಾನ ಕಡ್ಡಾಯ ಕೋರಿದ್ದ ಬಿಜೆಪಿಯ ಅಶ್ವಿನಿ ಕುಮಾರ್‌ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್‌ ನಕಾರ

0

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸಲು ಆದೇಶಿಸುವಂತೆ ಕೋರಿ ಬಿಜೆಪಿಯ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಶುಕ್ರವಾರ ದೆಹಲಿ ಹೈಕೋರ್ಟ್‌ ನಿರಾಕರಿಸಿದೆ.

 [ಅಶ್ವಿನಿ ಕುಮಾರ್‌ ಉಪಾಧ್ಯಾಯ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು].

ಮತದಾನ ಆಯ್ಕೆಯ ವಿಚಾರವಾಗಿದ್ದು, ನ್ಯಾಯಮೂರ್ತಿಗಳು ಶಾಸನ ರೂಪಿಸುವವರಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾ. ಸುಬ್ರಮೊಣಿಯಂ ಪ್ರಸಾದ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

ಚೆನ್ನೈನಲ್ಲಿ ನೆಲೆಸಿರುವ ಶ್ರೀನಗರದ ವ್ಯಕ್ತಿಯನ್ನು ತನ್ನ ತವರಿಗೆ ಬಂದು ಮತದಾನ ಮಾಡುವಂತೆ ಬಲವಂತ ಮಾಡಲಾಗದು. “ಪೊಲೀಸರಿಗೆ ಅವರನ್ನು ಬಂಧಿಸಿ, ಶ್ರೀನಗರಕ್ಕೆ ಕಳುಹಿಸುವಂತೆ ನಿರ್ದೇಶಿಸಬೇಕು ಎಂದು ನೀವು ಬಯಸುತ್ತಿದ್ದೀರಾ” ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಾಯ ತಾನು ನ್ಯಾಯಾಲಯವನ್ನು ಒತ್ತಾಯಿಸುವುದಿಲ್ಲ ಎಂದರು.

 “ನಿಮ್ಮನ್ನು ಹಿಡಿದು ಕೇಳಿದಾಗ ಮಾತ್ರ ನಾನು ನ್ಯಾಯಾಲಯವನ್ನು ಒತ್ತಾಯಿಸುವುದಿಲ್ಲ ಎನ್ನುತ್ತೀರಿ” ಎಂದು ಸಿಜೆ ಶರ್ಮಾ ಹೇಳಿದರು.

 “ಕಾಸ್‌ ಲಿಸ್ಟ್‌ ನೋಡಿದಾಗ ಇಂಥದ್ದೇ ಪ್ರಕರಣಗಳು ರಾಶಿ ಬಿದ್ಧಿರುತ್ತವೆ” ಎಂದು ಪೀಠ ಇದೇ ವೇಳೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ಅರ್ಜಿ ಹಿಂಪಡೆಯದಿದ್ದರೆ ದಂಡ ವಿಧಿಸಲಾಗುವುದು ಎಂದು ನ್ಯಾಯಾಲಯ ಹೇಳಿದಾಗ ಅವರು ಮನವಿ ಹಿಂಪಡೆದರು.

ಮತದಾನ ಕಡ್ಡಾಯಗೊಳಿಸಿದರೆ ಮತದಾನ ಹೆಚ್ಚಳವಾಗಲಿದ್ದು, ರಾಜಕೀಯದಲ್ಲಿ ಭಾಗವಹಿಸುವಿಕೆ ಹೆಚ್ಚಿ, ಪ್ರಜಾಪ್ರಭುತ್ವದ ಗುಣಮಟ್ಟ ಹೆಚ್ಚಳವಾಗುತ್ತದೆ ಎಂದು ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯಲ್ಲಿ ವಿವರಿಸಲಾಗಿತ್ತು.