ಮನೆ ಸುದ್ದಿ ಜಾಲ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ಜಲಾವೃತ

ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ಜಲಾವೃತ

0

ರಾಮನಗರ: ತಡರಾತ್ರಿ ಸುರಿದ ಮಳೆಯಿಂದ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯ ರಾಮನಗರ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಹೆದ್ದಾರಿಯ ಕೆಳಸೇತುವೆ ಬಳಿ ಸಾಕಷ್ಟು ನೀರು ನಿಂತು ಸರತಿಯಲ್ಲಿ ವಾಹನಗಳು ಚಲಿಸುತ್ತಿದ್ದು, ವಾಹನ ದಟ್ಟಣೆ ಸಹ ಉಂಟಾಗಿದೆ.

ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಬಳಿ ಬರುವ ಹೆದ್ದಾರಿಯ ಕೆಳಸೇತುವೆಯಲ್ಲಿ ಒಂದೂವರೆ ಎರಡು ಅಡಿಗಳಷ್ಟು ನೀರು ನಿಂತಿದೆ. ಎಕ್ಸ್ಪ್ರೆಸ್ ವೇನಲ್ಲಿ ವೇಗವಾಗಿ ಬರುವ ವಾಹನಗಳು ಒಮ್ಮೆಗೆ ವೇಗಕ್ಕೆ ಬ್ರೇಕ್ ಹಾಕಬೇಕಿದೆ. ನೀರಿನಲ್ಲಿ ವಾಹನಗಳು ಚಲಿಸುತ್ತಿರುವ ಪರಿಣಾಮ ಎಂಜಿನ್’ಗೆ ನೀರು ನುಗ್ಗಿ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.

ಮೈಸೂರು ಬೆಂಗಳೂರು ಎಕ್ಸ್’ಪ್ರೆಸ್ ವೇನಲ್ಲಿ 100 ಕಿ.ಮೀಗಿಂತ ವೇಗವಾಗಿ ಬರುವ ವಾಹನಗಳು ಸಂಗಬಸವನದೊಡ್ಡಿ ಬಳಿ ಬಂದ ಕೂಡಲೇ ಜಲಾವೃತವಾದ ಕೆಳಸೇತುವೆ ಪ್ರವೇಶಿಸಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ರಸ್ತೆಯಲ್ಲಿ 100 ರಿಂದ 200 ಮೀನಷ್ಟು ದೂರ ನಿಂತಿರುವ ನೀರಿನಲ್ಲಿ ವಾಹನ ಚಲಾಯಿಸಲು ಸವಾರರು ಪರದಾಟ ನಡೆಸುತ್ತಿದ್ದಾರೆ.

ಇಷ್ಟೆಲ್ಲ ಸಮಸ್ಯೆ ಆಗುತ್ತಿದ್ದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರು ಯಾರೊಬ್ಬರು ನೆರವಿಗೆ ಬಂದಿಲ್ಲಎಂದು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರ ಬೇಸರ ವ್ಯಕ್ತಪಡಿಸಿದ್ದಾರೆ.