ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ನಲ್ಲಿ ರಾಷ್ಟ್ರಧ್ವಜಕ್ಕೆ ಖಲಿಸ್ತಾನಿ ಉಗ್ರರು ಅಪಮಾನ ಮಾಡಿದ್ದು, ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ನ ಉಪ ಮುಖ್ಯಸ್ಥರನ್ನು ಕರೆಸಿ ತನ್ನ ಕಠಿಣ ನಿಲುವಿನ ಬಗ್ಗೆ ಎಚ್ಚರಿಸಿದೆ.
ಖಲಿಸ್ತಾನ ಪರ ಪ್ರತ್ಯೇಕವಾದಿಗಳು ಪ್ರತಿಭಟನೆ ವೇಳೆ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ನಲ್ಲಿ ಭಾರತ ಧ್ವಜವನ್ನು ಕೆಳಗಿಳಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ ಭಾನುವಾರ ರಾತ್ರಿ ದೆಹಲಿಯ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದೆ.
ಲಂಡನ್ ನಲ್ಲಿರುವ ಭಾರತೀಯ ರಾಜತಾಂತ್ರಿಕ ಸ್ಥಳಗಳು ಮತ್ತು ಸಿಬ್ಬಂದಿಯ ಭದ್ರತೆ ಬಗ್ಗೆ ಬ್ರಿಟನ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಧ್ವಜವನ್ನು ಕೆಳಗಿಳಿಸಿರುವ ಘಟನೆ ಕುರಿತು ದೆಹಲಿಯಲ್ಲಿರುವ ಹೈಕಮಿಷನ್ ನ ಅಧಿಕಾರಿಯನ್ನು ಎಂಇಎಗೆ ಕರೆಸಲಾಗಿದೆ. ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಭದ್ರತಾ ಲೋಪದ ಕುರಿತು ವಿವರಣೆ ಕೇಳಲಾಗಿದೆ.