ಮನೆ ಕಾನೂನು ರಸ್ತೆಗುಂಡಿಗಳ ಅವಘಡದಿಂದ ಜನರ ಸಾವು: ಹೈಕೋರ್ಟ್ ವ್ಯಥೆ

ರಸ್ತೆಗುಂಡಿಗಳ ಅವಘಡದಿಂದ ಜನರ ಸಾವು: ಹೈಕೋರ್ಟ್ ವ್ಯಥೆ

0

ಬೆಂಗಳೂರು: ‘ರಸ್ತೆ ಗುಂಡಿಗಳ ಅವಘಡದಿಂದ ಜನರು ಸಾವನ್ನಪ್ಪುವ ಕುರಿತ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಗಮನಿಸುವಾಗ ನಮಗೆ ಪಾಪಪ್ರಜ್ಞೆ ಕಾಡುತ್ತದೆ‘ ಎಂದು ಹೈಕೋರ್ಟ್ ವ್ಯಥೆಪಟ್ಟಿದೆ.

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸರ್ಕಾರ ಹಾಗೂ ಪಾಲಿಕೆಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಅಶ್ವಿನ್ ಎಂಬುವರು ರಸ್ತೆ ಗುಂಡಿಯ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ವಿಷಯವನ್ನು ಪ್ರಸ್ತಾಪಿಸಿದ ನ್ಯಾಯಪೀಠ, ‘ಮುಂದಿನ ಹದಿನೈದು ದಿನಗಳಲ್ಲಿ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಈ ವಿಚಾರದಲ್ಲಿ ಬಿಬಿಎಂಪಿ ನೆಪ ಹೇಳುವುದನ್ನು ಬಿಡಬೇಕು‘ ಎಂದು ಪಾಲಿಕೆಗೆ ಖಡಕ್‌ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದೆ.