ಮನೆ ರಾಷ್ಟ್ರೀಯ ಪರಿಶಿಷ್ಟರ ಮೀಸಲು ಪ್ರಮಾಣ ಹೆಚ್ಚಿಸುವ ಪ್ರಸ್ತಾವ ಕರ್ನಾಟಕ ಸರ್ಕಾರದಿಂದ ಬಂದಿಲ್ಲ: ಕೇಂದ್ರ ಸರ್ಕಾರ

ಪರಿಶಿಷ್ಟರ ಮೀಸಲು ಪ್ರಮಾಣ ಹೆಚ್ಚಿಸುವ ಪ್ರಸ್ತಾವ ಕರ್ನಾಟಕ ಸರ್ಕಾರದಿಂದ ಬಂದಿಲ್ಲ: ಕೇಂದ್ರ ಸರ್ಕಾರ

0

ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲು ಪ್ರಮಾಣವನ್ನು ಶೇ 6ರಷ್ಟು ಹೆಚ್ಚಿಸುವ ಸಂಬಂಧ ಕರ್ನಾಟಕ ಸರ್ಕಾರದ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಶ್ನೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಲಿಖಿತ ಉತ್ತರ ನೀಡಿದ್ದಾರೆ.

ಪರಿಶಿಷ್ಟರ ಮೀಸಲು ಹೆಚ್ಚಿಸಲು ಕರ್ನಾಟಕ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. ಅದರ ಪ್ರಕಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಮೀಸಲು ಪ್ರಮಾಣ ಶೇ 56 ಆಗಲಿದೆ ಎಂದೂ ಅವರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಪ್ರಮಾಣವನ್ನು ಹೆಚ್ಚಿಸಿ ಈಗಾಗಲೇ ತೆಗೆದುಕೊಂಡಿರುವ ನಿರ್ಣಯವನ್ನು ಸಂವಿಧಾನದ 9ನೇ ವಿಧಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಫೆಬ್ರುವರಿ 9ರಂದು ಕರ್ನಾಟಕದ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿತ್ತು.

ಸರ್ಕಾರದ ಕ್ರಮದಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಪರಿಶಿಷ್ಟ ಜಾತಿಗೆ ಶೇ 15 ರಿಂದ ಶೇ 17, ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ 7 ರಷ್ಟು ಹೆಚ್ಚಳವಾಗಲಿದೆ.

ಈ ಕ್ರಮಕ್ಕೆ ಸಾಂವಿಧಾನಿಕ ರಕ್ಷಣೆ ಪಡೆಯಲು ಸಂವಿಧಾನದ 9 ನೇ ವಿಧಿಗೆ ಸೇರಿಸುವುದು ಅಗತ್ಯ. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೇಂದ್ರಕ್ಕೆ ಶಿಫಾರಸು ಕಳಿಸಲು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅದಕ್ಕೆ ಸಮ್ಮತಿ ನೀಡಿದ್ದರು.