ಟೊಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಘಟನೆಯಿಂದಾಗಿ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಕಡಿತವಾಗಿದೆ, ನಾಲ್ವರು ಮೃತಪಟ್ಟಿದ್ದಾರೆ. 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ದೇಶದ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ, ವಿಶೇಷವಾಗಿ ಮಿಯಾಗಿ ಮತ್ತು ಫುಕುಶಿಮಾಗಳಲ್ಲಿ ಭೂಮಿ ಪ್ರಬಲವಾಗಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಉತ್ತರ ಅಕ್ಷಾಂಶ 37.7 ಮತ್ತು ಪೂರ್ವ ರೇಖಾಂಶ 141.7ರ 60 ಕಿಮೀ ಆಳದಲ್ಲಿ, ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11.36ರ ಸುಮಾರಿಗೆ ಕಂಪನ ಸಂಭವಿಸಿದೆ.ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
1 ಮೀಟರ್‌ನಷ್ಟು ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದ್ದು, ತೀರ ಪ್ರದೇಶದಿಂದ ದೂರವಿರುವಂತೆ ಸೂಚಿಸಲಾಗಿದೆ.ಭೂಕಂಪದಿಂದ ತೊಹೊಕು ಶಿಂಕನ್‌ಸೆನ್ ಬುಲೆಟ್ ರೈಲು ಹಳಿತಪ್ಪಿದ್ದು, ಆ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.