ಮನೆ ರಾಜ್ಯ ರಾಜ್ಯ ವಿಧಾನಸಭೆ ಚುನಾವಣೆ-2023: ಕಾಂಗ್ರೆಸ್’ನಿಂದ ಮೊದಲ ಪಟ್ಟಿ ಬಿಡುಗಡೆ

ರಾಜ್ಯ ವಿಧಾನಸಭೆ ಚುನಾವಣೆ-2023: ಕಾಂಗ್ರೆಸ್’ನಿಂದ ಮೊದಲ ಪಟ್ಟಿ ಬಿಡುಗಡೆ

0

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಪ್ರಕಟವಾಗಿದೆ. ಒಟ್ಟು 124 ಅಭ್ಯರ್ಥಿಗಳನ್ನ ಒಳಗೊಂಡ ಮೊದಲ ಪಟ್ಟಿಯನ್ನು ಇಂದು ಬೆಳಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರು ತಿಂಗಳ ಹಿಂದೆಯೇ ಸಿದ್ಧಪಡಿಸಿ ಕಳುಹಿಸಿದ್ದ ಪಟ್ಟಿಯನ್ನು ಪರಿಶೀಲನೆ ನಡೆಸಿ ಇಂದು ಅಂತಿಮಗೊಳಿಸಿದ್ದಾರೆ.

ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ

ವಿರೋಧಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ಸುರಕ್ಷಿತ ಕ್ಷೇತ್ರ’ವಾದ ವರುಣಾದಿಂದ ಸ್ಪರ್ಧಿಸಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಹೈಕಮಾಂಡ್‌ ಒಪ್ಪಿಗೆ ನೀಡಿದರೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದರು. ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲು ಕಳೆದ ವಾರ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆದಿತ್ತು. ಬಳಿಕ ಸಿದ್ದರಾಮಯ್ಯ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಕೋಲಾರದಿಂದ ಸ್ಪರ್ಧಿಸುವುದು ಬೇಡ ಎಂದು ಸಲಹೆ ನೀಡಿದ್ದರು. ಕುಟುಂಬದ ಸದಸ್ಯರ ಜತೆಗೆ ಸಮಾಲೋಚಿಸಿ ವರುಣಾದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಶುಕ್ರವಾರ ತೀರ್ಮಾನಿಸಿದ್ದರು. ಈ ವಿಷಯವನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದರು.

ದೇವನಹಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿದೆ. ಪುತ್ರನಿಗೆ ಟಿಕೆಟ್‌ ನೀಡಬೇಕು ಎಂದು ಪಾವಗಡದ ಹಾಲಿ ಶಾಸಕ ವೆಂಕಟರಮಣಪ್ಪ ಮನವಿ ಮಾಡಿದ್ದರು. ಪುತ್ರನಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್‌’ಗೆ ಇತ್ತೀಚೆಗೆ ಸೇರ್ಪಡೆಯಾದ ಯು.ಬಿ.ಬಣಕಾರ್ (ಹಿರೇಕೆರೂರು) ಅವರಿಗೆ ಮಣೆ ಹಾಕಲಾಗಿದೆ. ವಿಧಾನ ಪರಿಷತ್‌ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿರುವ ಪುಟ್ಟಣ್ಣ ಅವರನ್ನು ರಾಜಾಜಿನಗರದಲ್ಲಿ ಕಣಕ್ಕೆ ಇಳಿಸಲಾಗಿದೆ. ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ ಬಸವನಗುಡಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧಿಸಲಿದ್ದಾರೆ. ಮಹದೇವಪುರದಲ್ಲಿ ಎಚ್‌.ನಾಗೇಶ್‌ (ಮುಳಬಾಗಿಲಿನ ಪಕ್ಷೇತರ ಶಾಸಕ) ಸ್ಪರ್ಧಿಸಲಿದ್ದಾರೆ.

ಇತ್ತೀಚೆಗೆ ನಿಧನರಾದ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಪುತ್ರ ದರ್ಶನ್‌ ಧ್ರುವನಾರಾಯಣ ಅವರಿಗೆ ನಂಜನಗೂಡಿನಲ್ಲಿ ಟಿಕೆಟ್‌ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ದರ್ಶನ್ ಅವರನ್ನು ನಂಜನಗೂಡಿಯಲ್ಲಿ ಕಣಕ್ಕೆ ಇಳಿಸಲಾಗಿದೆ.

ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಅವರಿಗೆ ಟಿ.ನರಸೀಪುರದಲ್ಲಿ ಅವಕಾಶ ನೀಡಲಾಗಿದೆ. ಅಲ್ಲಿ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಬೆಳ್ತಂಗಡಿಯಲ್ಲಿ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಸಹೋದರ ಬಿ.ಕೆ.ಶಿವರಾಮ್‌ ಪುತ್ರ ರಕ್ಷಿತ್‌ ಶಿವರಾಮ್‌ ಅವರನ್ನು ಹುರಿಯಾಳುವನ್ನಾಗಿ ಮಾಡಲಾಗಿದೆ.

ಹಾಲಿ ಶಾಸಕರು ಇರುವ ಪುಲಕೇಶಿನಗರ (ಅಖಂಡ ಶ್ರೀನಿವಾಸಮೂರ್ತಿ), ಹರಿಹರ (ಎಂ. ರಾಮಪ್ಪ), ಕುಂದಗೋಳ (ಕುಸುಮಾ ಶಿವಳ್ಳಿ), ಲಿಂಗಸುಗೂರು (ಡಿ.ಎಸ್‌.ಹೂಲಗೇರಿ), ಅಫಜಲಪುರ (ಎಂ.ವೈ.ಪಾಟೀಲ), ಶಿಡ್ಲಘಟ್ಟ (ವಿ.ಮುನಿಯಪ್ಪ) ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.